ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರ ಮೊಟಕು ಖಂಡನೀಯ

JHONSON PINTO
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯ ಅಧಿಕಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಕಸಿದುಕೊಳ್ಳುವ ಮತ್ತು ಸದಸ್ಯರ ಅಧಿಕಾರ ಮೊಟಕುಗೊಳಿಸುವ ಸರ್ಕಾರದ ನಿರ್ಧಾರ ಖಂಡನೀಯ ಎಂದು ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಧಿಕಾರ ಕೇಂದ್ರೀಕರಣದಂತೆ ಗ್ರಾಪಂ ಅಧ್ಯಕ್ಷರಿಗೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಆದರೆ ಇದೀಗ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ನಡೆದಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ರಾಜ್ಯ ವ್ಯಾಪಿ ವಿರೋಧ ವ್ಯಕ್ತವಾಗುತ್ತಿದ್ದು, ಆದೇಶ ಹಿಂಪಡೆಯದಿದ್ದಲ್ಲಿ ಕೊಡಗಿನ ಗ್ರಾಪಂ ಸದಸ್ಯರು ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಮೊಟಕುಗೊಳಿಸಲು ಸರ್ಕಾರ ನೀಡಿರುವ ಕಾರಣ ಸತ್ಯಕ್ಕೆ ದೂರವಾಗಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಜನರಿಂದ ಆಯ್ಕೆಯಾದ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರನ್ನು ಗುರಿಯಾಗಿರಿಸಿರುವುದು ಸರಿಯಲ್ಲ. ಇದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಜನರಿಗೆ ಮಾಡಿದ ಅಪಮಾನ ಎಂದಿದ್ದಾರೆ.

ಮುಖ್ಯಮಂತ್ರಿಗಳು ಖುದ್ದು ಈ ಆದೇಶ ಪುನರ್ ಪರಿಶೀಲಿಸಿ ರದ್ದುಗೊಳಿಸುವ ಮೂಲಕ ಸಂಧಾನದ ಚೌಕಟ್ಟಿನಡಿ ರಚನೆಯಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಅಧಿಕಾರ ಕೇಂದ್ರೀಕರಣದ ಪರಿಕಲ್ಪನೆ ಬಲಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net