

ಪುತ್ತೂರು: ಕೃಷಿ ಕ್ಷೇತ್ರಕ್ಕೆ ಹೊಸತನದ ಸ್ಪರ್ಶ ಅಗತ್ಯವಿದ್ದು, ವಾಣಿಜ್ಯ ಮಾದರಿಯನ್ನು ಅಳವಡಿಸಬೇಕು. ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದಿಂದ ವಿಶೇಷ ಕೊಡುಗೆಯಿದ್ದು, ಉತ್ಪಾದಕತೆಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸವಾಗಬೇಕು. ಮೌಲ್ಯವರ್ಧನೆ ಮಾಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬೇಕು. ಗ್ರಾಮಜನ್ಯ ಸ್ಥಾಪನೆ ಕೃಷಿ ಕ್ಷೇತ್ರದಲ್ಲಿ ಆಶಾದಾಯಕವಾಗಿ ಪರಿಣಮಿಸಿದೆ ಎಂದು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಹೇಳಿದರು.
ಪುತ್ತೂರು ರಾಧಾಕೃಷ್ಣ ಸಂಕೀರ್ಣದಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಪ್ರಧಾನ ಕಚೇರಿ ಉದ್ಘಾಟಿಸಿ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರಖು ಠೇವಣಿ ಸೌಲಭ್ಯ ಲೋಕಾರ್ಪಣೆ ಮಾಡಿದ ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಮಾತನಾಡಿ, ವಿವಿಧ ಸಮಸ್ಯೆಯಿಂದ ಶೇ.೩೦ರಷ್ಟು ಮಾತ್ರ ಬೆಳೆ ಬರುತ್ತಿದ್ದು, ಕೃಷಿ ಉತ್ಪನ್ನಗಳು ಮಧ್ಯವರ್ತಿಗಳ ಕೈಗೆ ಸಿಕ್ಕಿ ಕೃಷಿಕರಿಗೆ ಲಾಭ ಸಿಗದ ಸ್ಥಿತಿಯಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಂಪನಿಗಳ ಸ್ಥಾಪನೆಗೆ ಮುಂದಾಗಿದೆ. ಹಲಸು, ಬಿದಿರು, ಜೇನು ಉತ್ಪಾದಕರಿಗೆ ಗ್ರಾಮಜನ್ಯ ಪ್ರೋತ್ಸಾಹ ನೀಡಲಿದೆ. ಕೃಷಿಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಹೆಚ್ಚುವರಿ ಷೇರುಗಳ ಲೋಕಾರ್ಪಣೆಯನ್ನು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ. ಜಿ. ರಾಜಾರಾಂ ಭಟ್ ನಡೆಸಿದರು. ಪುತ್ತೂರು ತಾಲೂಕು ಕೃಷಿಕ ಸಮಾಜದ ನಿರ್ದೇಶಕ ವಿಜಯಕುಮಾರ್ ರೈ ಹೆಚ್ಚುವರಿ ಷೇರುಗಳ ಮೊದಲ ಖರೀದಿದಾರರಾದರು. ಅಧ್ಯಕ್ಷತೆಯನ್ನು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಮೂಲಚಂದ್ರ ಕೆ. ವಹಿಸಿದ್ದರು.
ಸಂಸ್ಥೆಯ ನಿರ್ದೇಶಕರಾದ ರಾಮಪ್ರತೀಕ್ ಕರಿಯಾಲ, ಶ್ರೀಹರ್ಷ ಎಕ್ಕಡ್ಕ, ಶ್ರೀನಂದನ್ ಕೆ., ನಿರಂಜನ್ ಪೊಲ್ಯ, ಸಲಹಾ ಮಂಡಳಿ ಸದಸ್ಯ ಸತ್ಯನಾರಾಯಣ ಕೆ. ಉಪಸ್ಥಿತರಿದ್ದರು. ಸಾತ್ವಿಕ್ ಕಾಂತಿಲ ಸ್ವಾಗತಿಸಿದರು. ರವೀಶ್ ಕುಮಾರ್ ವಂದಿಸಿದರು. ಕಾರ್ಯನಿರ್ವಹಣಾಽಕಾರಿ ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಸದಸ್ಯರು ಸಹಕಾರಿ ಸಂಘಗಳ ಬೆಳವಣಿಗೆ ಕೈ ಜೋಡಿಸಬೇಕು. ವಾಣಿಜ್ಯ ಉತ್ಪನ್ನವಾದ ಅಡಕೆಗೆ ಪರ್ಯಾಯ ಬೆಳೆ ಬೆಳೆಯುವ ಕೆಲಸ ರೈತರಿಂದ ನಡೆಯಬೇಕು. ಕೇಂದ್ರ ಸಹಕಾರಿ ಸಚಿವರ ಮಾರ್ಗದರ್ಶನದಲ್ಲಿ ಪ್ರಾರಂಭವಾಗುತ್ತಿರುವ ಎಂ. ಪಿ. ಒ.ಗಳು ಉತ್ತಮವಾಗಿ ಕೆಲಸ ನಡೆಸಲಿವೆ. ರೈತರು ಸಮಗ್ರ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು.
| ಟಿ. ಜಿ. ರಾಜಾರಾಮ ಭಟ್
ನಿರ್ದೇಶಕರು, ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್