ನಾಲ್ಕು ವರ್ಷವಾದರೂ ನಡೆಯದ ಗ್ರಾಮಸಭೆ

12bhr 1 b kanaboor gp
ಬಿ.ಕಣಬೂರು ಗ್ರಾಪಂ
Published on

ಬಾಳೆಹೊನ್ನೂರು: ಪಟ್ಟಣದ ಬಿ.ಕಣಬೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸದಿರುವುದರಿಂದ ಗ್ರಾಮದ ಅಭಿವೃದ್ಧಿಗೆ ತೊಡಕಾಗಿದೆ.
2020ಕ್ಕೂ ಮೊದಲು ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಗ್ರಾಮಸಭೆ/ ವಾರ್ಡ್ ಸಭೆನಡೆಸಿದ್ದು, ನಂತರ ಕರೊನಾ ನೆಪ ಹೇಳಿ ಎರಡುವರ್ಷ ಸಭೆ ನಡೆಸಿರಲಿಲ್ಲ. ಕರೊನಾ ನಿಯಮ ಸಡಿಲಗೊಂಡ ನಂತರವೂ ಬಿ.ಕಣಬೂರು ಗ್ರಾಪಂನಿಂದ ಇದುವರೆಗೆ ಗ್ರಾಮಸಭೆ/ವಾರ್ಡ್ ಸಭೆಗಳನ್ನು ಕರೆಯದಿರುವುದರಿಂದ ಗ್ರಾಮದ ಹಲವು ಸಮಸ್ಯೆಗಳಿಗೆ ಈವರೆಗೂ ಪರಿಹಾರ ದೊರೆತಿಲ್ಲ. ಸಾರ್ವಜನಿಕರೂ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ವೇದಿಕೆಯೇ ಇಲ್ಲವಾಗಿದೆ.
ಪಂಚಾಯತ್‌ರಾಜ್ ಮತ್ತು ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸಭೆಗಳೇ ಆಧಾರಸ್ತಂಭವಾಗಿದೆ. ಸ್ಥಳೀಯ ಆಡಳಿತ ಮತ್ತು ಅಭಿವೃದ್ಧಿ ಕುರಿತು ಚರ್ಚಿಸಲು ಮತ್ತು ಗ್ರಾಮಕ್ಕೆ ಅಗತ್ಯ ಆಧಾರಿತ ಯೋಜನೆಗಳನ್ನು ರೂಪಿಸಲು ಗ್ರಾಮಸ್ಥರು ಗ್ರಾಮಸಭೆ ವೇದಿಕೆಯನ್ನು ಬಳಸಿಕೊಳ್ಳುತ್ತಾರೆ.
ಗ್ರಾಮಸಭೆ ಮೇಲ್ವಿಚಾರಣೆಯಡಿ ಗ್ರಾಪಂನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮ ಪಂಚಾಯಿತಿಯ ಎಲ್ಲ ಪ್ರಮುಖ ನಿರ್ಧಾರಗಳನ್ನು ಗ್ರಾಮಸಭೆ ಮೂಲಕ ತೆಗೆದುಕೊಳ್ಳಲಾಗುತ್ತದೆ. ಗ್ರಾಮಸಭೆ ಒಪ್ಪಿಗೆ ಇಲ್ಲದೆ ಯಾವುದೇ ನಿರ್ಧಾರ ಅಧಿಕೃತ ಮತ್ತು ಮಾನ್ಯವಾಗಿರುವುದಿಲ್ಲ.
ಗ್ರಾಮಸಭೆ ಪಂಚಾಯತ್‌ರಾಜ್ ವ್ಯವಸ್ಥೆಯ ಪ್ರಾಥಮಿಕ ಅಂಗವಾಗಿದೆ. ಗ್ರಾಮಸಭೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಬೇರೆ ಯಾವುದೇ ಸಂಸ್ಥೆ ರದ್ದುಗೊಳಿಸಲು ಸಾಧ್ಯವಿಲ್ಲ. ಗ್ರಾಮಸಭೆ ನಿರ್ಣಯ ರದ್ದುಗೊಳಿಸುವ ಅಧಿಕಾರ ಗ್ರಾಮಸಭೆಗೆ ಮಾತ್ರವೇ ಇರುತ್ತದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಕನಿಷ್ಠ ವರ್ಷಕ್ಕೆ ಒಂದು ಬಾರಿಯೂ ಗ್ರಾಮಸಭೆ ಕರೆಯದಿರುವುದರಿಂದ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ಹಿನ್ನೆಲೆಯಲ್ಲಿ ತಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ಮಂಡಳಿ ತಕ್ಷಣ ಗ್ರಾಮಸಭೆ ಕರೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net