ಅಧಿಕಾರಿಗಳ ಅನುಪಸ್ಥಿತಿ ಗ್ರಾಮಸಭೆ ಮಂದೂಡಿಕೆ

YLP GRAMASABHE
Published on

ಯಲ್ಲಾಪುರ: ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಗೆ ಅವಶ್ಯವಾಗಿ ಆಗಮಿಸಬೇಕಾಗಿದ್ದ ಕೆಲ ಅಧಿಕಾರಿಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮಸಭೆ ಮುಂದೂಡಲಾಯಿತು.

ಸಭೆಯಲ್ಲಿ 13 ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರೂ, ಹೆಸ್ಕಾಂ, ಪಶುಸಂಗೋಪನೆ, ಸಾರಿಗೆ, ಲೋಕೋಪಯೋಗಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿರಲಿಲ್ಲ.

ಎಲ್ಲಕ್ಕಿಂತ ಪ್ರಮುಖವಾಗಿ ಮಳೆಗಾಲದ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ತೊಂದರೆಯಾಗುತ್ತಿದೆ. ಹೆಸ್ಕಾಂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸಭೆಗೆ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಬಾರದೇ ಗ್ರಾಮಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಪಿಡಿಒ ರವಿ ಪಟಗಾರ ಮಾತನಾಡಿ, ಬಾರದೇ ಇರುವ ಅಧಿಕಾರಿಗಳನ್ನು ಆಹ್ವಾನಿಸಿ ಬೇರೊಂದು ದಿನ ಸಭೆ ನಡೆಸೋಣ. ಈ ದಿನ ಬಂದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಬಿಡಿ ಎಂದು ವಿನಂತಿಸಿದರೂ, ಗ್ರಾಮಸ್ಥರು ಒಪ್ಪಲಿಲ್ಲ.

ಉಸ್ತುವಾರಿ ಅಧಿಕಾರಿ ವಿದ್ಯಾಧರ ನಾಯ್ಕ, ಗ್ರಾಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಉಪಾಧ್ಯಕ್ಷ ಗಣೇಶ ರೋಖಡೆ, ಸಾಮಾಜಿಕ ಕಾರ್ಯಕರ್ತ ಗಿರಿಧರ ನಾಯ್ಕ ಇತರರು ಸಮಜಾಯಿಷಿ ನೀಡಲು ಮುಂದಾದರೂ ಪ್ರಯೋಜನವಾಗಲಿಲ್ಲ. ನಂತರ ಸಭೆಯನ್ನು ಮುಂದೂಡಲಾಯಿತು. ಗ್ರಾಪಂ ಸದಸ್ಯರಾದ ಸದಾಶಿವ ಚಿಕ್ಕೊತ್ತಿ, ವಿನಾಯಕ ನಾಯ್ಕ, ರಘುಪತಿ ಹೆಗಡೆ, ಮಂಗಲಾ ನಾಯ್ಕ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net