

ಕಡೂರು: ಚೌಳಹಿರಿಯೂರಲ್ಲಿ ಕೆಲವರು ಅಕ್ರಮವಾಗಿ ಮುಚ್ಚಿದ್ದ ಗ್ರಾಮದ ಕೆರೆ ಏರಿ ತೆರವುಗೊಳಿಸಲು ಸೋಮವಾರ ಗ್ರಾಪಂ ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಚೌಳಹಿರಿಯೂರಿನ ಸರ್ವೇ.ನಂ 5ರಲ್ಲಿ 102.33 ಎಕರೆ ವಿಸ್ತೀರ್ಣ ಕೆರೆ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, 450-500 ಎಕರೆ ಭೂಮಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ ಭದ್ರಾ ಮೇಲ್ದಂಡೆ ಯೋಜನೆಗೂ ಒಳಪಟ್ಟು ಕಲ್ಕೆರೆಯ ಕುಕ್ಕಸಮುದ್ರ ಕೆರೆಯಿಂದ ನೀರಿನ ಹರಿವು ಹೊಂದಿದೆ. ಈ ಕೆರೆಯನ್ನು ಕೆಲವರು ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ, ಗ್ರಾಪಂ ಅನುಮತಿ ಪಡೆಯದೇ ಅನಧಿಕೃತವಾಗಿ ಕೆರೆ ಮಣ್ಣು ಬಗೆದು ಏರಿ ನಿರ್ಮಿಸಿದ್ದರು. ಈ ಬಗ್ಗೆ ಕೆಲ ಗ್ರಾಮಸ್ಥರು ಗ್ರಾಪಂಗೆ ದೂರು ಸಲ್ಲಿಸಿದ್ದರು.
ಈ ಕುರಿತು ಗ್ರಾಪಂನಿಂದ ಮಾಹಿತಿ ಪಡೆದು ಸೋಮವಾರ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥಗೆ ಕೆಲವು ಗ್ರಾಮಸ್ಥರು ತಡೆ ನೀಡಿ ಏರಿ ತೆರವುಗೊಳಿಸಬಾರದು ಹಾಗೆ ಮಾಡಿದರೆ ಇಡೀ ಕೆರೆ ಸರ್ವೇ ನಡೆಸಬೇಕು. ಎಲ್ಲ ಒತ್ತುವರಿ ತೆರವು ಮಾಡಿಬೇಕು ಎಂದು ಆಗ್ರಹಿಸಿದರು. ಕೊನೆಗೆ ಮಂಜುನಾಥ್ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ ಅಲ್ಲಿಂದ ತೆರಳಿದರು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಗ್ರಾಮಸ್ಥರ ದೂರಿನ ಅನ್ವಯ ಗ್ರಾಪಂನಲ್ಲಿ ಸೋಮವಾರ ತುರ್ತು ಸಭೆ ಕರೆಯಲಾಗಿತ್ತು. ಅನಾರೋಗ್ಯದ ಕಾರಣ ಒಡ್ಡಿ ಅಧ್ಯಕ್ಷರೂ ಸೇರಿ ಮೂವರು ಸದಸ್ಯರು ಸಭೆಗೆ ಗೈರಾಗಿದ್ದರು. ಕೋರಂ ಆಧಾರದಲ್ಲಿ ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿದ ಉಳಿದ 9 ಜನ ಸದಸ್ಯರು, ಕೆರೆ ಮುಚ್ಚುವುದು ಕಾನೂನು ಬಾಹಿರ ಕೃತ್ಯ ಇಂತಹ ನಡೆಗಳಿಂದ ಕೆರೆ ಸಂರಕ್ಷಣೆ ಉದ್ದೇಶಕ್ಕೆ ಧಕ್ಕೆ ಹಾಗೂ ಗ್ರಾಮದ ಕೋಮುಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಅಕ್ರಮವನ್ನು ಜನರ ಭಾವನೆಗಳಿಗೆ ಧಕ್ಕೆ ತರದಂತೆ ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಕೆ.ವಿ.ತಿಮ್ಮಪ್ಪ, ಮಾಜಿ ಅಧ್ಯಕ್ಷ ಎಚ್.ಎಂ.ಯತೀಶ್, ಎಚ್.ಎಸ್.ಮಲ್ಲೇಶಪ್ಪ, ಶಿವಶಂಕರ್, ಸಂದೀಪ್, ಸದಸ್ಯರಾದ ಮಂಜೀಬಾಯಿ, ಸುಧಾ ದೇವರಾಜ್, ಪ್ರೇಮಾ ನಾಗರಾಜ್, ಅನಸೂಯಮ್ಮ, ಪಿಡಿಒ ಕುಮಾರಸ್ವಾಮಿ, ಕಾರ್ಯದರ್ಶಿ ವಿನಯ್ ಟಿಕಾರೆ ಇದ್ದರು.