ಶುದ್ಧ ಕುಡಿಯುವ ನೀರಿನ ಘಟಕದ ಮೇಲ್ವಿಚಾರಕನಿಗೆ ಗ್ರಾಪಂ ಅಧ್ಯಕ್ಷ ಕ್ಲಾಸ್!

28hos1p water
ಮೂಡುಗೊಪ್ಪದಲ್ಲಿ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಕುರಿತಂತೆ ಮೇಲ್ವಿಚಾರಕರನ್ನು ತರಾಟೆ ತೆಗೆದುಕೊಂಡಿರುವ ಕರುಣಾಕರ ಶೆಟ್ಟಿ. ಅರುಣ ಬೈಸೆ, ರಾಮಚಂದ್ರ, ಶ್ರೀಪಾದ್ ಇತರರು.
Published on

ಹೊಸನಗರ: ಶುದ್ಧ ನೀರಿನ ಘಟಕ ನಿರ್ಮಾಣಗೊಂಡು 5 ವರ್ಷ ಕಳೆದರೂ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರಿಗೆ ಪ್ರಯೋಜನ ಸಿಗದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಘಟಕದ ಮೇಲ್ವಿಚಾರಕರನ್ನು ಬಸ್ ನಿಲ್ದಾಣದಲ್ಲಿ ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ಮೂಡುಗೊಪ್ಪ ಗ್ರಾಪಂ ಆವರಣದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಈವರೆಗೂ ಘಟಕ ಆರಂಭಗೊಂಡಿಲ್ಲ. ಆದಾಗ್ಯೂ ಘಟಕದ ಮೇಲ್ವಿಚಾರಕರು ಬಂದು ಫೋಟೋ ತೆಗೆದು ಉತ್ತಮವಾಗಿದೆ ಎಂದು ಸುಳ್ಳು ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡುತ್ತಿದ್ದರು. ಶುಕ್ರವಾರ ಮೇಲ್ವಿಚಾರಕ ವಿಶಾಲ್ ಬರುತ್ತಿದ್ದಂತೆ ಮೂಡುಗೊಪ್ಪ ಅಧ್ಯಕ್ಷ ಕರುಣಾಕರಶೆಟ್ಟಿ ಸೇರಿದಂತೆ ಸ್ಥಳೀಯರು ತರಾಟೆ ತೆಗೆದುಕೊಂಡರು. ಉತ್ತಮವಾಗಿದೆ ಎಂದು ವರದಿ ನೀಡುವುದಲ್ಲ, ನೀರು ಬರಬೇಕು. ವ್ಯತ್ಯಾಸವಾದರೆ ಗ್ರಾಪಂನನ್ನು ಹೊಣೆ ಮಾಡಲಾಗುತ್ತದೆ. ಇದಕ್ಕೆ ಯಾರು ಹೊಣೆ ಎಂದು ಕರುಣಾಕರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಘಟಕದಿಂದ ಕೂಡಲೆ ನೀರು ಹರಿಸಿ ತೋರಿಸಿ ಎಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು, ಸಮಸ್ಯೆ ಕುರಿತು ಘಟಕದ ನಿರ್ವಹಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಭಾನುವಾರ ಘಟಕವನ್ನು ದುರಸ್ತಿಗೊಳಿಸುವುದಾಗಿ ನಿರ್ವಹಣಾಧಿಕಾರಿ ಭರವಸೆ ನೀಡಿದ ಬಳಿಕ ಸ್ಥಳೀಯರು ತಣ್ಣಗಾದರು.
ಗ್ರಾಪಂ ಸದಸ್ಯ ಅರುಣ ಬೈಸೆ, ಪಿಡಿಒ ರಾಮಚಂದ್ರ, ಎಎಸ್‌ಐ ಶ್ರೀಪಾದ್, ಪೇದೆ ವೆಂಕಟೇಶ್, ಪ್ರಮುಖರಾದ ದೇವು ನಗರ, ಜುಡೋ ರವಿ, ಕಿಶೋರ್ ನಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net