

ಬಸವಕಲ್ಯಾಣ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಸಂವಿಧಾನದ ಮೂಲ ಆಶಯ ಸಾಕಾರಗೊಳ್ಳಲು ಸ್ಥಳೀಯ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಮುಡಬಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮೂರ್ತ ರೂಪ ದೊರೆಯುವುದು ಗ್ರಾಪಂ ವ್ಯವಸ್ಥೆಯಲ್ಲಿ ಮಾತ್ರ. ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಗ್ರಾಮ ಪಂಚಾಯಿತಿಗಳ ಹೊಣೆಗಾರಿಕೆ ಗಣನೀಯ ಎಂದರು.
ನಮ್ಮ ದೇಶ ಪ್ರಜಾಪ್ರಭುತ್ವದ ಯಶಸ್ಸು ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿ ಮೇಲೆ ನಿಂತ್ತಿದೆ. ಗ್ರಾಮಗಳು ಸಮಗ್ರ ಅಭಿವೃದ್ಧಿ ಹೊಂದಲಿ, ಮುಡಬಿ ಮಾದರಿ ಗ್ರಾಮ ಪಂಚಾಯಿತಿಯಾಗಿ ರೂಪುಗೊಳ್ಳಲಿ ಎಂದು ನುಡಿದರು.
ಶಾಸಕ ಶರಣು ಸಲಗರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಂದ ಅನುದಾನವನ್ನು ಗ್ರಾಮ ಪಂಚಾಯಿತಿಯ ಎಲ್ಲ ಸಮಾಜದ ಜನರಿಗೆ ನೀಡಬೇಕು. ಶಾಸಕ ನಿಧಿಯಿಂದ ಕೆಕೆಆರ್‌ಡಿಬಿಯಿಂದ ೫೦ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಕಾವೇರಿ ಕಾಂಬಳೆ, ಉಪಾಧ್ಯಕ್ಷ ಅಮರನಾಥ ಕಿಣ್ಣಿವಾಡಿ, ಪಿಡಿಒ ಮಹಾಂತೇಶ ಸಲಗರ, ಜಗದೀಶ ಪಾಟೀಲ್, ಸಿದ್ದು ಮೇತ್ರೆ, ಶಂಕರ ಸೋನಕೇರಿ, ಸುಮಿತ್ ನಿಪ್ಪಾಣಿ, ಶ್ರೀಶೈಲ ಶೆಟಗಾರ, ಸದಾನಂದ ಪಾಟೀಲ್, ಭೀಮಶಾ ಮಂದಿರಕರ್ ಇತರರಿದ್ದರು. ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಕುಪೇಂದ್ರ ಪಾಲಾಡಿ ಸ್ವಾಗತಿಸಿ, ನಿರೂಪಣೆ ಮಾಡಿದರು.