

ಕೋಲಾರ: ಗ್ರಾಪಂಗಳಿಗೆ ನಡೆಯುವ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಈಗಾಗಲೇ ಕೆಲವು ಪಂಚಾಯಿತಿಗಳಲ್ಲಿ ಚುನಾವಣೆ ಪೂರ್ಣಗೊಂಡಿದ್ದು ಇನ್ನೂ ಬಹುತೇಕ ಪಂಚಾಯಿತಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಏತನ್ಮಧ್ಯೆ ಆಕಾಂಕ್ಷಿ ಅಭ್ಯರ್ಥಿಗಳಿಂದ ಪಂಚಾಯಿತಿ ಸದಸ್ಯರ ಕುದುರೆ ವ್ಯಾಪಾರ ಜೋರಾಗಿದೆ.
ಆಯಾ ಪಂಚಾಯಿತಿಗಳಿಗೆ ಮೀಸಲಾತಿ ಘೋಷಣೆಯಾಗಿದೆ. ಸಾಮಾನ್ಯ ಮೀಸಲಾತಿ ಪಂಚಾಯಿತಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಕಾಂಗಳಿಂದ ಸದಸ್ಯರಿಗೆ ಆಮಿಷಗಳ ಮಹಾಪೂರವೇ ಹರಿದುಬರುತ್ತಿದೆ. ಇದಲ್ಲದೆ ಸದಸ್ಯರನ್ನು ಅಪಹರಿಸುವುದು, ಅವರನ್ನು ವಿಪಕ್ಷದವರ ಕೈಗೆ ಸಿಗದಂತೆ ಪ್ರವಾಸಕ್ಕೆ ಕರೆದೊಯ್ಯವುದು ಮತ್ತು ಕುಟುಂಬಸ್ಥರ ಮೂಲಕ ಆಮಿಷ ಒಡ್ಡಲಾಗುತ್ತಿದೆ. ಅಧ್ಯಕ್ಷ ಸ್ಥಾನದ ಆಕಾಂಗಳಿಂದ ಒಬ್ಬ ಸದಸ್ಯನಿಗೆ ಲಕ್ಷಗಟ್ಟಲೇ ಮೌಲ್ಯದ ಆಫರ್ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸ್ಥಳಿಯ ನಾಯಕರಿಗೆ ಉಸ್ತುವಾರಿ: ಮೀಸಲು ಕ್ಷೇತ್ರಗಳು ಇದಕ್ಕೆ ಹೊರತಾಗಿಲ್ಲ. ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆ ನಡೆದಿರುವುದರಿಂದ ಶಾಸಕರು ಪಂಚಾಯಿತಿಗಳ ಉಸಾಬರಿಯನ್ನು ಆಯಾ ಪಂಚಾಯಿತಿ ವ್ಯಾಪ್ತಿಯ ಮುಖಂಡರಿಗೆ ಬಿಟ್ಟುಕೊಟ್ಟು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿರುವ ಶಾಸಕರು ಮತ್ತು ಮಾಜಿ ಶಾಸಕರು ಗ್ರಾಪಂ ಚುನಾವಣೆಗಳಿಗೂ ಬಂಡವಾಳ ಹಾಕಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಹಿಂದೆ ಸರಿದಿದ್ದಾರೆ.
ತೀವ್ರ ನಿಗಾ: ಅಧ್ಯಕ್ಷ ಉಪಾಧ್ಯಕ್ಷ ಆಕಾಂಗಳು ಆಯಾ ಹೋಬಳಿಗಳ ಮುಖಂಡರ ಬೆಂಬಲದಿಂದ ಸದಸ್ಯರನ್ನು ಖರೀದಿಸಲು ಮುಂದಾಗಿದ್ದಾರೆ. ಚುನಾವಣೆ ದಿನಾಂಕಕ್ಕೆ 4&5 ದಿನಗಳಿರುವಾಗಲೇ ಸದಸ್ಯರನ್ನು ಹೈಜಾಕ್ ಮಾಡಿ ಅವರು ಕೇಳುವ ಸ್ಥಳಕ್ಕೆ ಪ್ರವಾಸಕ್ಕೆ ಕರೆದೊಯ್ಯವುದರೊಂದಿಗೆ ಮೋಜು&ಮಸ್ತಿ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರವಾಸಕ್ಕೆ ಕರೆದೊಯ್ದಿರುವ ಸದಸ್ಯರನ್ನು ಪ್ರತಿಪಕ್ಷದವರು ಸಂಪರ್ಕಿಸಬಾರದು ಎಂಬ ಉದ್ದೇಶದಿಂದ ಅವರ ಮೊಬೈಲ್ಗಳನ್ನು ಸ್ವಿಚ್ಡ್ ಆಫ್ ಮಾಡಿಸಿ ಇವರಿಗೆ ಬೇಕಾದವರ ಒಂದು ಮೊಬೈಲ್ ಸಂಖ್ಯೆಯಿಂದ ಮಾತ್ರ ಎಲ್ಲರೂ ಮಾತನಾಡುವಂತೆ ನಿಗಾ ವಹಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಇನ್ನೂ 5 ವರ್ಷ ಬಾಕಿ ಇರುವುದರಿಂದ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಹೆಚ್ಚು ಒತ್ತು ನೀಡದಿರುವುದರಿಂದ ಸ್ಥಳಿಯ ಮುಖಂಡರಲ್ಲಿ ಪಂಚಾಯಿತಿ ಚುನಾವಣೆ ಗರಿಗೆದರಿದೆ. ಮುಂದೆ ಜಿಪಂ ತಾಪಂ ಚುನಾವಣೆ ಬರುವುದರಿಂದ ಆಕಾಂಗಳು ಪಂಚಾಯಿತಿ ಚುನಾವಣೆ ಉಸ್ತುವಾರಿ ಹೊತ್ತು ಈಗಿನಿಂದಲೇ ತಾಲೀಮು ಆರಂಭಿಸಿದ್ದಾರೆ.
ಆಭರಣಗಳ ಆಮಿಷ: ಚುನಾವಣೆಗೆ ಕಡಿಮೆಯಿಲ್ಲದಂತೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಭರಾಟೆ ಜೋರಾಗಿದೆ. ಕೆಲವರು ಹಣದ ಆಮಿಷಗಳನ್ನು ಸದಸ್ಯರಿಗೆ ನೀಡುತ್ತಿದ್ದರೆ ಇನ್ನೂ ಕೆಲವರು ಚಿನ್ನ, ಬೆಳ್ಳಿ ಜತೆಗೆ ನನ್ನನ್ನು ಆಯ್ಕೆ ಮಾಡಿದರೆ ಪಂಚಾಯಿತಿಯ ಎಲ್ಲ ಗುತ್ತಿಗೆ ಕಾಮಗಾರಿಗಳನ್ನು ಸದಸ್ಯರಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿಗಳಿಗೆ ಹಣ ಒದಗಿಸಲು ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ.ಗಳಿಗೆ ಬರುವ ಹಣದಲ್ಲಿಯೇ ಅಭಿವೃದ್ಧಿಪಡಿಸಬೇಕಾಗುತ್ತದೆ. ಶಾಸಕರ ಅನುದಾನ ಸರ್ಕಾರ ಕಡಿತಗೊಳಿಸುವ ಸೂಚನೆ ಇರುವುದರಿಂದ ಪಂಚಾಯಿತಿಗಳೇ ಅಭಿವೃದ್ಧಿಗೆ ಕಾರಣವಾಗಿರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಬೇಡಿಕೆ ಹೆಚ್ಚಾಗಿದೆ.