ಗ್ರಾಮೀಣರ ಮನ ಗೆಲ್ಲಲು ಪೈಪೋಟಿ

Gramayana Election Logo_2020
Published on

ಹಳ್ಳಿ ಫೈಟ್‌ನಲ್ಲಿ ಪಕ್ಷಗಳ ಹಸ್ತಕ್ಷೇಪ ತಡೆಯಲು ಚುನಾವಣೆ ಆಯೋಗ ಕಟ್ಟುನಿಟ್ಟಿನ ಆದೇಶವೇನೋ ಹೊರಡಿಸಿದೆ. ಆದರೆ, ಪಕ್ಷಾತೀತವಾಗಿ ನಡೆಯಬೇಕಿರುವ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷ ಬೆಂಬಲಿತರನ್ನು ಗೆಲ್ಲಿಸಲು ಪ್ರಮುಖ ಪಕ್ಷಗಳು ಪೈಪೋಟಿಗೆ ಇಳಿದಿವೆ. ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿತರನ್ನು ಆಯ್ಕೆ ಮಾಡಲು ಇನ್ನಿಲ್ಲದ ಕಸರತ್ತು ನಡೆಸಿವೆ. ಮತದಾರರನ್ನು ಸೆಳೆಯಲು ಮತ್ತು ಹಿಡಿದಿಟ್ಟುಕೊಳ್ಳಲು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು ಆ ಕುರಿತು ಪಕ್ಷದ ಜಿಲ್ಲಾಧ್ಯಕ್ಷರು ಹಂಚಿಕೊಂಡ ಮಾಹಿತಿ ಇಲ್ಲಿದೆ.

ವಿಜಯವಾಣಿ ವಿಶೇಷ ವಿಜಯಪುರ ಗ್ರಾಪಂ ಚುನಾವಣೆ ಅಖಾಡ ಅಂತಿಮಗೊಳ್ಳುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತರನ್ನು ಗೆಲ್ಲಿಸಲು ನಾನಾ ಕಸರತ್ತು ಆರಂಭಿಸಿವೆ. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಪಕ್ಷಗಳು ಬೆಂಬಲಿತ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಸಜ್ಜಾಗಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮದೇ ರೂಪು ರೇಷೆ ಸಿದ್ಧಪಡಿಸಿಕೊಂಡಿದ್ದು ಆಗಲೇ ಅಖಾಡದಲ್ಲಿ ಕಾರ್ಯಾಚರಣೆ ಕೈಗೊಂಡಿವೆ.

ಬಿಜೆಪಿ ಪಂಚರತ್ನ ಸಮಿತಿ ರಚನೆ

ಪಂಚರತ್ನ ಸಮಿತಿ ರಚನೆ ಮೂಲಕ ಬಿಜೆಪಿ ಬೂತ್‌ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಎಲ್ಲ ಸಮುದಾಯದವರನ್ನು ಒಳಗೊಂಡ ಸಮಿತಿ ಇದಾಗಿದ್ದು, ಪಕ್ಷದ ಬೆಂಬಲಿತರನ್ನು ಗೆಲ್ಲಿಸುವುದು ಇದರ ಜವಾಬ್ದಾರಿಯಾಗಿದೆ. ಸಮಿತಿಯಲ್ಲಿ ಇರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುತ್ತಾರೆ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ.

ಈಗಾಗಲೇ ಗ್ರಾಮ ಸ್ವರಾಜ್ಯ ಸಮಾವೇಶ ಮೂಲಕ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲಾಗಿದೆ. ಮಾತ್ರವಲ್ಲ ಹೆಚ್ಚು ಹೆಚ್ಚು ಕಾರ್ಯಕರ್ತರು ಮತ್ತು ಬೆಂಬಲಿತರ ಗೆಲುವಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರದ ಪ್ರಮುಖರಿಗೂ ಜವಾಬ್ದಾರಿ ವಹಿಸಲಾಗಿದೆ. ಗ್ರಾಪಂ ಬಲಿಷ್ಟಗೊಳಿಸಲು ಬಿಜೆಪಿ ಸರ್ಕಾರ ಕೋಟಿ ರೂ. ಅನುದಾನ ನೀಡಿದ್ದು ಈ ಹಿಂದಿನ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾಗಿ ಕೂಚಬಾಳ ತಿಳಿಸುತ್ತಾರೆ.

ಬೂತ್ ಸಮಿತಿಯಲ್ಲಿ 10 ಜನರಿದ್ದು ಪೇಜ್ ಪ್ರಮುಖರು ಸಹ ಮತದಾರರನ್ನು ಕರೆತಂದು ಮತ ಚಲಾಯಿಸುವಂತೆ ಮಾಡಲಾಗುತ್ತಿದೆ. ಉಸ್ತುವಾರಿ ಮಂತ್ರಿಗಳು ಸಹ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಡಲಕ್ಕೆ ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ. ಅತೀ ಹೆಚ್ಚು ಬಿಜೆಪಿ ಬೆಂಬಲಿತರನ್ನು ಗೆಲ್ಲಿಸುವ ಗುರಿ ಇದೆ ಎನ್ನುತ್ತಾರೆ ಕೂಚಬಾಳ.

ಕಾಂಗ್ರೆಸ್ ಬೆಂಬಲಿತ ಗುಂಪು ರಚನೆ

ಗ್ರಾಪಂ ಚುನಾವಣೆಯಲ್ಲಿ ಪ್ರತಿ ವಿಧಾನ ಸಭೆಗೆ ಚುನಾವಣೆ ಸಮಿತಿ ರಚಿಸಲಾಗಿದೆ. ಹಾಲಿ ಹಾಗೂ ಮಾಜಿ ಶಾಸಕರ ಹೆಗಲಿಗೆ ಚುನಾವಣೆ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ಹಳ್ಳಿಗೆ ಹೋಗಿ ಕಾಂಗ್ರೆಸ್ ಬೆಂಬಲಿತರ ಗುಂಪು ರಚನೆ ಮಾಡಿ ಪೆನಲ್ ರಚಿಸುವ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿತರನ್ನು ಗೆಲ್ಲಿಸಲು ಯೋಜನೆ ರೂಪಿಸಿದ್ದಾಗಿ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ತಿಳಿಸುತ್ತಾರೆ.

ಪಕ್ಷದ ಪ್ರಮುಖರೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಯಡಿಯೂರಪ್ಪ ಅವರ ಆಡಳಿತ ವೈಫಲ್ಯ, ಜನ ವಿರೋಧಿ ನೀತಿಯಿಂದ ಗ್ರಾಮೀಣರು ಬೇಸತ್ತಿದ್ದಾರೆ. ಸಿದ್ದರಾಮಯ್ಯ ಅವರ ಭಾಗ್ಯಗಳ ಸರಣಿ ನೆನೆದು ಸಾರ್ವಜನಿಕರು ಕಾಂಗ್ರೆಸ್ ಬಲವರ್ಧನೆಗೆ ಪಣ ತೊಟ್ಟಿದ್ದಾರೆ. ಹೀಗಾಗಿ ಪಕ್ಷದ ಪರ ಒಲವಿದೆ. ಈ ಬಾರಿ ಶೇ. 90 ರಷ್ಟು ಗ್ರಾಪಂಗಳನ್ನು ತೆಕ್ಕೆಗೆ ತೆಗೆದುಕೊಳ್ಳುವುದಾಗಿ ರಾಜು ಆಲಗೂರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜೆಡಿಎಸ್‌ನಿಂದ ವೀಕ್ಷಕರ ನೇಮಕ

ಗ್ರಾಪಂ ಚುನಾವಣೆ ಹಿನ್ನೆಲೆ ಜೆಡಿಎಸ್‌ನಿಂದ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಲಾಗಿದ್ದು ತಾಲೂಕಿಗೆ ಇಬ್ಬರಂತೆ 26 ವೀಕ್ಷಕರನ್ನು ನೇಮಿಸಿದ್ದಾಗಿ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ತಿಳಿಸುತ್ತಾರೆ.

ಗ್ರಾಮೀಣ ಮಟ್ಟದಲ್ಲಿ ಪಕ್ಷದ ಪರ ಒಲವಿದೆ. ನಿಷ್ಠಾವಂತ ಕಾರ್ಯಕರ್ತರನ್ನು ಗೆಲ್ಲಿಸಲು ಪ್ರಯತ್ನ ನಡೆದಿದೆ. ಹಾಲಿ, ಮಾಜಿ ಅಧ್ಯಕ್ಷ- ಉಪಾಧ್ಯಕ್ಷರಿಗೂ ಜವಾಬ್ದಾರಿ ನೀಡಲಾಗಿದೆ. ವೀಕ್ಷಕರು ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಪಕ್ಷ ಬೆಂಬಲಿತರನ್ನು ಗೆಲ್ಲಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಎದುರಿಸಲು ಜೆಡಿಎಸ್ ಸಜ್ಜಾಗಿದೆ. ಜೆಡಿಎಸ್ ಗ್ರಾಮೀಣ ರೈತರ ಪರವಾಗಿದೆ. ಇದೇ ಕಾರಣಕ್ಕೆ ವಿಧಾನ ಸಭೆ ಚುನಾವಣೆಯಲ್ಲಿ ಇಬ್ಬರು ಶಾಸಕರು ಗೆದ್ದು ಬಂದರು. ಜೆಡಿಎಸ್ ಹಳ್ಳಿ ಪಾರ್ಟಿ. ಹಳ್ಳಿ ಭಾಗದಲ್ಲಿ ದೇವೇಗೌಡರ, ಕುಮಾರಸ್ವಾಮಿ ಅವರ ಯೋಜನೆಗಳು ಜನಪ್ರಿಯವಾಗಿದ್ದು ಜಾತ್ಯತೀತ ಪಕ್ಷವಾದ್ದರಿಂದ ನಮ್ಮ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ ಎಂದು ಯಂಡಿಗೇರಿ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಗ್ರಾಮ ರಾಜ್ಯದ ಕನಸು ಕಂಡವರು ಗಾಂಧೀಜಿ. ಗಾಂಧಿ ಕನಸು ನನಸು ಮಾಡಿದವರು ಜೆಡಿಎಸ್ ನಾಯಕರು. ಹಳ್ಳಿ ಹಳ್ಳಿಗೆ ಕುಡಿಯುವ ನೀರು ಕೊಟ್ಟವರು ನಾವು, ರೈತರ ಸಾಲ ಮನ್ನಾ ಮಾಡಿದ ಮೊದಲ ಸರ್ಕಾರ ನಮ್ಮದು, ದಲಿತರು, ಹಿಂದುಳಿದವರ ಪರವಾದ ಪಕ್ಷ ನಮ್ಮದು. ಗ್ರಾಮೀಣಾಭಿವೃದ್ಧಿ ಆಗಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಬೆಂಬಲಿತರು ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net