ಶಾಲೆ ಪ್ರಾರಂಭೋತ್ಸವ ಹಬ್ಬದಂತೆ ಆಚರಿಸಿ

chn may 26 .santhebenuru (2)
Published on

ಚನ್ನಗಿರಿ: ಬೇಸಿಗೆ ರಜಾ ಕಳೆದು ಶಾಲೆಗಳು ಪ್ರಾರಂಭವಾಗಲಿದೆ, ಆರಂಭೋತ್ಸವವನ್ನು ಎಲ್ಲ ಶಾಲೆಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಬೇಕು ಹಾಗೂ ಶೇ.100 ರಷ್ಟು ಹಾಜರಾತಿಗೆ ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಸಂತೇಬೆನ್ನೂರು ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ ಹೇಳಿದರು.

ತಾಲೂಕಿನ ಸಂತೇಬೆನ್ನೂರು ಗ್ರಾಮದ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಮಕ್ಕಳನ್ನು ಕರೆತರಲು ಪಾಲಕರನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಅಕ್ಷರ ಜ್ಞಾನಕ್ಕಿಂತ ಮಿಗಿಲಾಗಿರುವುದು ಯಾವುದೂ ಇಲ್ಲ. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ತಂದೆ-ತಾಯಿ ಮಗುವಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಗುರಿಯನ್ನು ಹೊಂದಿರುತ್ತಾರೆ ಎಂದರು.

ಮನೆಯ ಆರ್ಥಿಕ ಸ್ಥಿತಿ ಸರಿಯಿಲ್ಲ ಎನ್ನುವ ಕಾರಣಕ್ಕೆ ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸುವುದರಿಂದ ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಆ ಮಗು ಸಮಾಜಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚಿರುತ್ತವೆ. ಆದ್ದರಿಂದ ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ವಿದ್ಯಾವಂತರನ್ನಾಗಿಸುವ ಕಾರ್ಯಕ್ಕೆ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.

ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಡಿ.ಬಿ.ಕಿರಣ್ ಮಾತನಾಡಿ, 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಲಿದ್ದು, ಶಾಲಾ ಸಿಬ್ಬಂದಿ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಚಿಣ್ಣರಿಗೆ ಹೂ ಹಾಗೂ ಸಿಹಿ ವಿತರಿಸುವ ಮೂಲಕ ಹಬ್ಬದ ರೀತಿ ಆರಂಭ ಮಾಡಲು ಸಿದ್ಧತೆ ನಡೆಸಬೇಕು ಎಂದರು.

ಮುಖ್ಯ ಶಿಕ್ಷಕ ಎಚ್.ಎನ್.ರವಿ ಮಾತನಾಡಿ, ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ದಿನದಂದು ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ನಂತರ ಸಿಹಿ ಊಟದ ವ್ಯವಸ್ಥೆ ಇರುತ್ತದೆ. ಶಾಲಾ ಆವರಣ ಸ್ವಚ್ಛಗೊಳಿಸಿ ಹಸಿರು ತೋರಣ ಕಟ್ಟಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಪಾಲಕರಿಗೆ ನೀಡುವ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ದಿಶಾ ಸಮಿತಿ ಸದಸ್ಯ ಮೂರ್ತಪ್ಪ, ಶಿಕ್ಷಣ ಸಂಯೋಜಕ ಕುಬೇರಪ್ಪ, ಪಾಪಯ್ಯ, ಎಂ.ಬಿ.ನಾಗರಾಜ್ ಕಾಕನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net