ಬಾಡಿಗೆ ವಸೂಲಿ ಮಾಡದ ಗ್ರಾಪಂ

ಅರಸೀಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿರುವುದು.
ಅರಸೀಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿರುವುದು.
Published on

ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಬದಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಹಾಗೂ ಕಂದಾಯದ ಮೊತ್ತ ಪಾವತಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ.

ಇಂತಹದೊಂದು ಆರೋಪ ಇದೀಗ ತಾಲೂಕಿನ ದೀಗಹಾರನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನಾಗರಿಕರಿಂದ ಕೇಳಿ ಬಂದಿದೆ. ಆರು ತಿಂಗಳ ಹಿಂದೆ (ಸೆ.24) ರಂದು 32 ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲಾಗಿತ್ತು. ಕನಿಷ್ಠ 3800 ರೂ.ಗಳಿಂದ 16,800 ರೂ.ವರೆಗೆ ಬಿಡ್ ಮಾಡಿದ್ದ ಬಾಡಿಗೆದಾರರು ವ್ಯಾಪಾರ ಆರಂಭಿಸಿದ್ದರು. ಪ್ರಕ್ರಿಯೆ ಪೂರ್ಣಗೊಂಡು ಆರು ತಿಂಗಳು ಕಳೆದರೂ ಗ್ರಾಪಂನಿಂದ ಬಾಡಿಗೆ ವಸೂಲಿ ಮಾಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಈ ವಿಚಾರದಲ್ಲಿ ಪಿಡಿಒ ಹಾಗೂ ಸಿಬ್ಬಂದಿ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದರೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಗ್ರಾಮ ಪಂಚಾಯಿತಿ ಕಡೆ ಮುಖ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ. ವಾಣಿಜ್ಯ ಮಳಿಗೆ ಬಾಡಿಗೆ ವಸೂಲಿ ಮಾಡದಿರುವುದರಿಂದ ಗ್ರಾಮ ಪಂಚಾಯಿತಿ ಆದಾಯ ಖೋತಾ ಆಗಿದೆ. 32 ಮಳಿಗೆಗಳಿಂದ ಒಟ್ಟಾರೆ 10,80,000 ರೂ. ಬಾಕಿ ಬರಬೇಕಿದೆ ಎನ್ನಲಾಗಿದೆ.

ನಿಯಮಾನುಸಾರ ಹರಾಜಿನಲ್ಲಿ ವಾಣಿಜ್ಯ ಮಳಿಗೆಗಳನ್ನು ಪಡೆದಿರುವ ವರ್ತಕರು ಗ್ರಾಮ ಪಂಚಾಯಿತಿ ನಿಗದಿಪಡಿಸಿರುವ ತಮ್ಮ ಪಾಲಿನ ಬಾಡಿಗೆ ಮೊತ್ತ ಪಾವತಿಸಲು ಸಿದ್ಧರಿದ್ದಾರೆ. ಆದರೆ, ಅಧಿಕಾರಿಗಳು ವಸೂಲಿ ಪ್ರಕ್ರಿಯೆ ನಡೆಸಿಲ್ಲ. ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಕೇಳಿದರೆ ದೊಡ್ಡ ಮೊತ್ತ ಎಲ್ಲಿಂದ ನೀಡಲು ಸಾಧ್ಯ ಎನ್ನುವ ಅಳಲು ವ್ಯಾಪಾರಿಗಳದ್ದಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸೂಲಾಗಿರುವ ಕಂದಾಯ ಬಾಬ್ತಿನ ಮೊತ್ತವನ್ನು ಸಂಬಂಧಿಸಿದ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎನ್ನುವುದು ನಿಯಮ. ಪ್ರಸಕ್ತ 2024-25ರ ಜನವರಿವರೆಗೆ 21,56,704 ರೂ. ಕಂದಾಯವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಆದರೆ ಈ ಪೈಕಿ 19,15,949 ರೂ. ಮಾತ್ರ ಖಾತೆಗೆ ಜಮೆಯಾಗಿದ್ದು, ಇನ್ನುಳಿದ 2,40,755 ರೂ. ಸಂದಾಯ ಆಗಿಲ್ಲ. ಈ ಕುರಿತಂತೆ ಮೂರು ದಿನದಲ್ಲಿ ಉತ್ತರಿಸುವಂತೆ ಗ್ರಾಪಂ ಪಿಡಿಒಗೆ ಫೆ.14ರಂದು ನೋಟಿಸ್ ನೀಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಕರ ವಸೂಲಿ ಮಾಡಲು ನೇಮಿಸಿರುವ ಗ್ರಾಪಂ ಕಚೇರಿ ಹಂಗಾಮಿ ನೌಕರನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕಾರ್ಯದರ್ಶಿ ಪಿಡಿಒಗೆ ಫೆ.19ರಂದು ನೀಡಿರುವ ಲಿಖಿತ ಉತ್ತರ ಆಡಳಿತದ ಲೋಪವನ್ನು ಅನಾವರಣಗೊಳಿಸಿದೆ. ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಸ್ಥಳೀಯ ಸಂಸ್ಥೆ ಉಳಿಸಲು ಪ್ರಯತ್ನ ನಡೆಸುವರೇ ಎಂಬುದನ್ನು ಕಾದುನೋಡಬೇಕಿದೆ.

ಗ್ರಾಮದ ಆಯಕಟ್ಟಿನ ಜಾಗದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ವರ್ತಕರಿಂದ ವಸೂಲಿ ಮಾಡುವಲ್ಲಿ ಆಗಿರುವ ವಿಳಂಬ ಕುರಿತು ಮಾಹಿತಿ ಪಡೆಯಲಾಗುವುದು. ಇನ್ನು ಕಂದಾಯ ವಸೂಲಿ ಹಾಗೂ ಪಾವತಿಯಲ್ಲಿ ವ್ಯತ್ಯಾಸವಾಗಿದೆ ಎನ್ನುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಉತ್ತರಿಸುವಂತೆ ನೋಟಿಸ್ ಕೊಡಲಾಗಿದೆ. ಸ್ಥಳೀಯ ಸಂಸ್ಥೆ ಆದಾಯ ಸೋರಿಕೆ ತಡೆಗಟ್ಟಲು ಎಲ್ಲ ರೀತಿಯ ಕ್ರಮ ಜರುಗಿಸಲಾಗುವುದು.

ಸತೀಶ್ ತಾಪಂ ಇಒ, ಅರಸೀಕೆರೆ

ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಿ ಆರು ತಿಂಗಳು ಕಳೆದಿದ್ದರೂ ಗ್ರಾಪಂ ಅಧಿಕಾರಿಗಳು ಬಾಡಿಗೆ ವಸೂಲಿ ಮಾಡಿಲ್ಲ. ಇದರಿಂದಾಗಿ ಕುಡಿಯುವ ನೀರು, ಸ್ವಚ್ಛತೆ ಒಳಗೊಂಡಂತೆ ಯಾವುದೇ ಮೂಲಸೌಕರ್ಯ ಒದಗಿಸಲು ಸಾಧ್ಯವಿಲ್ಲದಂತಾಗಿದೆ. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಮನಗಂಡು ವಿವಿಧ ಕಾಮಗಾರಿ ಕೈಗೊಳ್ಳಲು 25 ಲಕ್ಷ ರೂ.ನಿಗದಿ ಮಾಡಲಾಗಿದೆ. ಗ್ರಾಪಂನಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನ್ಯರಿಗೆ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದು ತಾರತಮ್ಯಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ತಕ್ಷಣವೇ ಲೋಪ ಸರಿಪಡಿಸಬೇಕು.

ಸುಫಿಯಾನ್ ಪಾಷಾ ಗ್ರಾಪಂ ಸದಸ್ಯ ಹಾರನಹಳ್ಳಿ

ಹಾರನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಕಳೆದ ಆರು ತಿಂಗಳ ಹಿಂದೆ ಬಹಿರಂಗ ಹರಾಜು ನಡೆಸಿ ವರ್ತಕರಿಗೆ ಕೊಡಲಾಗಿದೆ. ಆದರೆ ಬಾಡಿಗೆ ವಸೂಲಿ ಮಾಡಲು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮನೆ, ವಾಣಿಜ್ಯ ಸಂಕೀರ್ಣ, ನಿವೇಶನ ಸೇರಿದಂತೆ ವಿವಿಧ ಮೂಲಗಳಿಂದ 21,56,704 ಲಕ್ಷ ರೂ. ರಾಜಸ್ವ ಸಂಗ್ರಹವಾಗಿದೆ. ಆದರೆ ಈ ಪೈಕಿ 19,15,949 ಲಕ್ಷ ರೂ.ಮಾತ್ರವೇ ಗ್ರಾಪಂ ಬ್ಯಾಂಕ್ ಖಾತೆಗೆ ಹಾಕಲಾಗಿದೆ. ಇನ್ನುಳಿದ 2,40,755 ಲಕ್ಷ ರೂ. ಯಾರ ಜೇಬು ಸೇರಿದೆ ಎನ್ನುವ ಪ್ರಶ್ನೆಗೆ ಇದೂವರೆಗೂ ಸ್ಪಷ್ಟ ಉತ್ತರ ದೊರೆತಿಲ್ಲ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ. ಹೀಗಿದ್ದರೂ ಉನ್ನತಾಧಿಕಾರಿಗಳು ಮೌನಕ್ಕೆ ಶರಣಾಗಿರುವುದೇಕೆ

ದಾನಪ್ಪ ಕನಕಂಚೇನಹಳ್ಳಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net