

ಮಂಡ್ಯ: ಮಳವಳ್ಳಿ ತಾಲೂಕು ಹಲಗೂರು ಗ್ರಾಮ ಪಂಚಾಯಿತಿ ಪಿಡಿಒ ಸಿ.ರುದ್ರಯ್ಯ ಹಲವು ಅಕ್ರಮಗಳಲ್ಲಿ ತೊಡಗಿದ್ದಾರೆ. ಆದರೂ ಆತನ ಅಮಾನತಿಗೆ ಕ್ರಮ ವಹಿಸದೇ ಹಾಗೂ ಬೆಂಬಲಕ್ಕೆ ನಿಂತಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಧೋರಣೆ ವಿರೋಧಿಸಿ ಅ.16ರಂದು ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲು ತೊರೆಕಾಡನಹಳ್ಳಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಹಲಗೂರು ಗ್ರಾ.ಪಂ ಸದಸ್ಯ ಕೆ.ಸುರೇಂದ್ರ ಎಚ್ಚರಿಕೆ ನೀಡಿದರು.
ಸಿ.ರುದ್ರಯ್ಯ ವಿರುದ್ಧ ಹಲವು ಅಕ್ರಮಗಳ ಬಗ್ಗೆ ದೂರು ದಾಖಲಿಸಲಾಗಿದೆ. ಮಾತ್ರವಲ್ಲದೆ ಈ ಅಕ್ರಮ ಸಾಬೀತಾದರೂ ಮಳವಳ್ಳಿ ಶಾಸಕ ಅಥವಾ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ. ಪಿಡಿಒ ವಿರುದ್ಧ ಇನ್ನಷ್ಟು ಅಕ್ರಮ ಪ್ರಕರಣಗಳಿವೆ. ಆದರೂ ಕ್ರಮ ಕೈಗೊಳ್ಳದೇ ಅದೇ ಪಂಚಾಯಿತಿಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿರುವುದು ಸಾಕ್ಷ್ಯನಾಶದ ಹುನ್ನಾರವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಿಡಿಒ ವಿರುದ್ಧ ದೂರು ಹೆಚ್ಚಾದ ಹಿನ್ನಲೆ ಜಿಲ್ಲಾಧಿಕಾರಿ ಬೇರೆಡೆಗೆ ವರ್ಗ ಮಾಡಿದ್ದರೂ, ಒತ್ತಡದ ಮೇರೆಗೆ ಅದೇ ಗ್ರಾ.ಪಂಗೆ ಬಂದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದಲ್ಲದೆ ಅಕ್ರಮ ಸಂಬಂಧ ತನಿಖೆ ಮಾಡುವಂತೆ ಹೈಕೋರ್ಟ್ ಜಿ.ಪಂ ಸಿಇಒಗೆ ಆದೇಶ ನೀಡಿದ್ದರೂ, ಈವರೆಗೆ ತನಿಖೆ ಮಾಡಿಲ್ಲ. ಈತನಿಗೆ ಜಿ.ಪಂ ಸಿಇಒ ಅವರೇ ಬೆನ್ನೆಲುಬಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಜೆಡಿಎಸ್ ಎಸ್ಸಿ, ಎಸ್ಟಿ ಹಲಗೂರು ಘಟಕದ ಅಧ್ಯಕ್ಷ ಜಿ.ವಿ.ಕುಮಾರಸ್ವಾಮಿ, ದಲಿತ ಮುಖಂಡರಾದ ನಾಗರಾಜು, ನಾಗೇಂದ್ರ ಶಾಗ್ಯ, ರವೀಂದ್ರ ಇದ್ದರು.