VIDEO| ಕರೊನಾ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಗ್ರಾಮದ ಜನರ ಹಿತ ಕಾಯಲು ಮನೆಯನ್ನೇ ಅಡವಿಟ್ಟ ಗ್ರಾಪಂ ಸದಸ್ಯ

Member
Published on

ಚಿಕ್ಕೋಡಿ: ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ತಮ್ಮ ಗ್ರಾಮದ ಜನರ ಹಿತವನ್ನು ಕಾಯಲು ತಮ್ಮ ಮನೆಯನ್ನೇ ಅಡವಿಟ್ಟು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾನವೀಯತೆ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ.

ಹುಕ್ಕೇರಿ ತಾಲೂಕಿನ ಗವನಾಳ ಗ್ರಾಪಂ ಸದಸ್ಯ ಶ್ರೀನಿವಾಸ್​ ಅವರು ಮನೆ ಅಡವಿಟ್ಟು ಬಂದಂತಹ 30 ಸಾವಿರ ರೂ. ಹಣದಲ್ಲಿ ಬಡವರಿಗೆ ಉಚಿತವಾಗಿ ಆಹಾರ ಕಿಟ್ ವಿತರಿಸಿದ್ದಾರೆ.

ಕರೊನಾ ಲಾಕ್​ಡೌನ್​ನಿಂದ ಇಡೀ ರಾಜ್ಯವೇ ಸ್ತಬ್ಧವಾಗಿದ್ದು, ಕೆಲಸವಿಲ್ಲದೇ ಯಾವುದೇ ಆದಾಯ ಹುಟ್ಟದಿರುವುದರಿಂದ ಅನೇಕ ಬಡಕುಟುಂಬಗಳು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸಿದ ಶ್ರೀನಿವಾಸ್​, ಬಡಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

ಶ್ರೀನಿವಾಸ್​ ಮಾನವೀಯ ಕಾರ್ಯಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ಸೂಚಿಸಿದ್ದು, ಮತ ಹಾಕಿಸಿಕೊಂಡ ಕೆಲವರು ನಮಗೇಕೆ ಊರ ಉಸಾಬರಿ ಎಂದು ಸುಮ್ಮನ್ನೇ ಕೈಕಟ್ಟಿ ಕುಳಿತಿರುವ ಸಂದರ್ಭದಲ್ಲಿ ಶ್ರೀನಿವಾಸ್​ ಮಾದರಿಯಾಗಿದ್ದಾರೆ.

ಕರೊನಾ ವೈರಸ್​ ಜಾಗತಿಕವಾಗಿ ಮೃತ್ಯಕೂಪವನ್ನು ನಿರ್ಮಿಸಿದ್ದು, ಆರೋಗ್ಯ ಎಚ್ಚರಿಕೆಯ ನಡುವೆ ಮಾನವೀಯತೆಯನ್ನು ಪರೀಕ್ಷೆಗೆ ಒಡ್ಡಿದೆ. ಬಿಕ್ಕಟ್ಟಿನ ಸಮಯದಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವ ಕುಟುಂಬಗಳಿಗೆ ಸಹಾಯಾಸ್ತ ಅಗತ್ಯವಾಗಿದ್ದು, ಮಾನವನ ಮಾನವೀಯ ಗುಣವನ್ನು ಕರೊನಾ ನಿಜಕ್ಕೂ ಪರೀಕ್ಷೆಗೆ ಒಡ್ಡಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net