

ಮೂಡುಬಿದಿರೆ: ಪಂಚಾಯಿತಿ ಪರವಾನಗಿ ಇಲ್ಲದೆ ನಿಯಮ ಉಲ್ಲಂಘಿಸಿ ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಹಂಸನಗರ ಬಳಿ ಕಾರ್ಯಾಚರಿಸುತ್ತಿದ್ದ ಲಾಂಡ್ರಿ ಫ್ಯಾಕ್ಟರಿಗೆ ಗ್ರಾಪಂ ಸೋಮವಾರ ಬೀಗ ಜಡಿದಿದೆ.
ಭೂಪರಿವರಿವರ್ತನೆ ಆಗದೆ, ಮೂಡಾ, ಪರಿಸರ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೆ ಮೆ.ಕ್ಲೀನ್ ಆ್ಯಂಡ್ ಕ್ರಿಸ್ಟ್ ಲಾಂಡ್ರಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಇದಕ್ಕೆ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗಿತ್ತು. ಫ್ಯಾಕ್ಟರಿಯಿಂದ ಹೊರಬರುವ ರಾಸಾಯನಿಕಗಳನ್ನು ಒಳಗೊಂಡ ತ್ಯಾಜ್ಯ ನೀರನ್ನು ಸಂಸ್ಕರಿಸದೆ ತೊಟ್ಟಿಯಲ್ಲಿ ಸಂಗ್ರಹಿಸಿ ರಾತ್ರಿ ವೇಳೆ ಸಾರ್ವಜನಿಕ ಚರಂಡಿಗೆ ಹರಿಯ ಬಿಡುತ್ತಿದ್ದರಿಂದ ಹಂಸನಗರದ ಸುತ್ತಮುತ್ತಲಿನ ನಿವಾಸಿಗಳ ಕುಡಿಯುವ ನೀರಿನ ಬಾವಿ, ಕೊಳಬಾವಿಗಳು ರಾಸಾಯನಿಕ ಮಿಶ್ರಿತಗೊಂಡು ಕುಡಿಯಲು ಅಯೋಗ್ಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಡಿಸೆಂಬರ್ 2024ರಲ್ಲಿ ಪಂಚಾತಿಗೆ ದೂರು ನೀಡಿದ್ದರು. ಲಾಂಡ್ರಿಗೆ 2024ರ ಡಿಸೆಂಬರ್ 13ರಂದು ಬೀಗ ಮುದ್ರೆ ಹಾಕುವ ಆದೇಶ ಜಾರಿ ಮಾಡಿತ್ತು. ಪಂಚಾಯಿತಿ ಆದೇಶವನ್ನು ಪ್ರಶ್ನಿಸಿ ಲಾಂಡ್ರಿ ಮಾಲೀಕರು ಹೈಕೋರ್ಟ್ ದಾವೆ ಹೂಡಿ ಬಲವಂತದ ಕ್ರಮ ಕೈಗೊಳ್ಳಬಾರದೆಂದು ತಡೆಯಾಜ್ಞೆ ತಂದಿದ್ದರು.
ತಡೆಯಾಜ್ಞೆ ಅವಧಿ ಮುಗಿದಿದ್ದರೂ ಲಾಂಡ್ರಿ ಫ್ಯಾಕ್ಟರಿಯು ರಾಜಾರೋಷವಾಗಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಪಂಚಾಯಿತಿ ದೂರು ಸಲ್ಲಿಸಿ, ಕ್ರಮ ಕೈಗೊಳ್ಳದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಗೊಂಡ ಪಿಡಿಒ ಭೀಮ ನಾಯ್ಕ ಕ್ರಮ ತೆಗೆದುಕೊಂಡಿದ್ದಾರೆ.
ಪಿಡಿಒಗೆ ಬೆದರಿಕೆ
ದಿಟ್ಟ ನಿರ್ಧಾರವನ್ನು ಕೈಗೊಂಡು ಲಾಂಡ್ರಿ ಫ್ಯಾಕ್ಟರಿಗೆ ಬೀಗ ಮುದ್ರೆ ಹಾಕಲು ಹೋಗಿದ್ದ ಪುತ್ತಿಗೆ ಗ್ರಾಪಂ ಪಿಡಿಒ ಭೀಮ ನಾಯ್ಕ ಬಿ.ಅವರಿಗೆ ಲಾಂಡ್ರಿಯ ಮಾಲಕ ಮೊಬೈಲ್ ಕರೆಯ ಮೂಲಕ ಧಮ್ಕಿ ಹಾಕಿರುವುದಾಗಿ ತಿಳಿದು ಬಂದಿದೆ.