ದಾಖಲೆ ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಳ್ಳಿ: ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ

Gram Panchayat Level Janata Darshan Programme Mandya
Published on

ಮಂಡ್ಯ: ತಾಲೂಕಿನ ಕೊತ್ತತ್ತಿ ಒಂದನೇ ಹಾಗೂ ಎರಡನೇ ವೃತ್ತದ ವ್ಯಾಪ್ತಿಯಲ್ಲಿ ಸುಮಾರು 12,000 ಪೌತಿಖಾತೆ ಬಾಕಿ ಇವೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲೂಕಿನ ಹಳುವಾಡಿ ಶ್ರೀನಿವಾಸ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ತಗ್ಗಹಳ್ಳಿ ಹಾಗೂ ಹಳುವಾಡಿ ಗ್ರಾಮ ಪಂಚಾಯಿತಿ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌತಿ ಖಾತೆ ಆಂದೋಲನ ಪೂರ್ಣ ಪ್ರಮಾಣದಲ್ಲಿ ಆಗಬೇಕು. ತಮ್ಮ ದಾಖಲಾತಿ ಸಲ್ಲಿಸಿ, ಸಮಸ್ಯೆಗಳನ್ನು ಸರಿಪಡಿಸಿಕೊಂಡು ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಿ ಎಂದು ತಿಳಿಸಿದರು.

ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕೆಂದು ತಾಲೂಕು ಮಟ್ಟದ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಲಾಖೆವಾರು ಅಹವಾಲು ಸ್ವೀಕರಿಸಿ ಸಾರ್ವಜನಿಕರ ಹಾಗೂ ರೈತರ ಕುಂದು ಕೊರತೆಗಳನ್ನು ಪರಿಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ. ಸರ್ಕಾರ ಹೊಸ ಯೋಜನೆ ಜಾರಿಗೆ ತರುತ್ತಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆವಿನ್ಯೂ ಸೈಟ್‌ಗಳ ಮಾಲೀಕರಿಗೆ 11ಬಿ ಅನ್ವಯ ಬಿ ಖಾತಾ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿ ಮನೆ ಕಟ್ಟಬೇಕಾದರೆ ರಸ್ತೆಗೆ ಜಾಗ ಬಿಡಬೇಕು. ಈ ರೀತಿಯಾಗಿ ಎಲ್ಲವನ್ನು ಕಾನೂನು ವ್ಯಾಪ್ತಿಗೆ ತಂದು ಹೊಸ ಯೋಜನೆ ಜಾರಿಗೆ ತರುತ್ತಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಕಾನೂನು ರೀತಿ ತೆರವುಗೊಳಿಸಬೇಕಾದರೆ ಪೊಲೀಸ್ ರಕ್ಷಣೆ ತೆಗೆದುಕೊಳ್ಳಬೇಕು. ಗ್ರಾಮಠಾಣಾ ಒಳಗಡೆ ಬರುವ ಆಸ್ತಿಗಳಿಗೆ ಶೇ.100ರಷ್ಟು ಇ-ಸ್ವತ್ತು ಕೊಡಲಾಗುವುದು ಎಂದರು.

ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಸರ್ವೇ ನಂಬರ್‌ನಲ್ಲಿ ಮನೆ ಕಟ್ಟಿಕೊಂಡಿದ್ದರೆ ಪಂಚಾಯಿತಿ ಖಾತೆಯನ್ನು ಕ್ರಮಬದ್ಧವಾಗಿ ಅಲಿನೇಷನ್ ಮಾಡಿಸಿಕೊಳ್ಳಬೇಕು. ಗ್ರಾಪಂ ಖಾತೆಯನ್ನು ಮಾಡಿಸಿಕೊಂಡರೆ ನಿಮಗೆ ದಾಖಲೆಯಾಗಿ ಅವು ಉಳಿಯುತ್ತವೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶಿವಮೂರ್ತಿ, ಎಡಿಎಲ್ಆರ್ ಮಮತಾ, ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಹಳುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಆರ್.ಕೃಷ್ಣ, ಉಪ ತಹಸೀಲ್ದಾರ್ ಡಿ.ತಮ್ಮಣ್ಣಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net