

ಮಡಿಕೇರಿ: ಗ್ರಾಮ ಪಂಚಾಯಿತಿ ನೌಕರರಿಗೆ "ಸಿ" ಮತ್ತು "ಡಿ" ದರ್ಜೆಯ ಸ್ಥಾನಮಾನಕ್ಕಾಗಿ ರಾಜ್ಯ ಮಟ್ಟದ ಹೋರಾಟಕ್ಕೆ ಗ್ರಾಮ ಪಂಚಾಯಿತಿ ನೌಕರರು ಸಂಪೂರ್ಣ ಸಹಕಾರ ನೀಡಬೇಕು ಎಂದು ದಕ್ಷಿಣ ಕನ್ನಡಹೋರಾಟ ಸಮಿತಿ ಅಧ್ಯಕ್ಷ ಮತ್ತು ಕೊಡಗು ಜಿಲ್ಲಾ ಹೋರಾಟ ಸಮಿತಿಯ ಉಸ್ತುವಾರಿ ದಯಾನಂದ ಪೆರುವಾಜೆ ಮನವಿ ಮಾಡಿದರು.
ಭಾಗಮಂಡಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯಮಟ್ಟದ ಹೋರಾಟದ ಕುರಿತು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಮತ್ತು ಆರ್.ಡಿ.ಪಿ.ಆರ್ ಮಡಿಕೇರಿ ತಾಲೂಕಿನ ಸಮಿತಿ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪೂರ್ವ ಭಾವಿ ಸಮಾಲೋಚನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿದ ಯೋಜನೆಗಳನ್ನು ಪ್ರಥಮವಾಗಿ ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿಗೆ ಗ್ರಾಮ ಪಂಚಾಯಿತಿ ನೌಕರರು ತಲುಪಿಸುತ್ತಾರೆ. ಗ್ರಾಮದ ಸಂಪನ್ಮೂಲ ಕ್ರೂಡೀಕರಣ ಮತ್ತು ನಲ್ಲಿ ನೀರು ಒದಗಿಸುವುದರ ಜತೆಗೆ ಗ್ರಾಮದ ಸ್ವಚ್ಛತೆ ಮಾಡುತ್ತಾರೆ. ಆದರೆ, ಸರ್ಕಾರಿ ಸವಲತ್ತು ಆರೋಗ್ಯ ಭದ್ರತೆ, ಭವಿಷ್ಯ ನಿಧಿ, ಸೇವಾ ಭದ್ರತೆಯಿಂದ ವಂಚಿತರಾಗಿದ್ದಾರೆ. ಈ ಸಂಬಂಧ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಗ್ರಾ.ಪಂ ನೌಕರರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸಿ ಮತ್ತು ಡಿ ದರ್ಜೆ ಸ್ಥಾನಮಾನ ಒದಗಿಸುವುದರ ಜತೆಗೆ ಪಟ್ಟಣ ಪಂಚಾಯಿತಿ ಮಾದರಿಯಂತೆ ವೇತನ ಶ್ರೇಣಿ, ಇಎಸ್‌ಐ ಮತ್ತು ಭವಿಷ್ಯ ನಿಧಿ ಸವಲತ್ತನ್ನು ಒದಗಿಸಬೇಕು. ನೌಕರರ ವಿದ್ಯಾರ್ಹತೆ ಮತ್ತು ವಯೋಮಿತಿ ಪರಿಗಣಿಸದೆ ಅವರ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಪುತ್ತೂರು ತಾಲೂಕಿನ ಹೋರಾಟ ಸಮಿತಿ ಅಧ್ಯಕ್ಷ ಹೊನ್ನಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟ ಸಮಿತಿ ಸದಸ್ಯರಾದ ಯಶ್ವಂತ್ ಗೌಡ, ತನುರಾಜ್ ಹಾಗೂ ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಅಮೆ ಜಯಕುಮಾರ್, ಮಡಿಕೇರಿ ತಾಲೂಕಿನ ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷ ವೀರನ್, ಉಪಾಧ್ಯಕ್ಷೆ ರೇಷ್ಮಾ, ಕಾರ್ಯದರ್ಶಿ ಬಾರಿಕೆ ಜೀವನ್ ಕುಮಾರ್ ಇತರರು ಹಾಜರಿದ್ದರು.