

ಮಂಡ್ಯ: ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ತಾಲೂಕಿನ ದುದ್ದ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಕೆಲಸದಿಂದ ವಜಾಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಿಡಿಒ ಅವರು ಗ್ರಾಪಂ ಸಿಬ್ಬಂದಿಯಿಂದ ತಮ್ಮ ಸ್ವಂತ ಜಮೀನಿನ ಕೆಲಸ ಮಾಡಿಕೊಂಡಿರುವುದು ಜೀತಕ್ಕೆ ಸಮಾನವಾಗಿದೆ. ಭತ್ತದ ಹೊರೆಗಳನ್ನು ಪಂಚಾಯಿತಿ ನೌಕರರ ತೆಲೆ ಮೇಲೆ ಹೊತ್ತುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ಇದರಿಂದ ಸಿಬ್ಬಂದಿ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಆರೋಪಿಸಿದರು.
ಪಿಡಿಒ ಅಧಿಕಾರ ಬಳಸಿಕೊಂಡು ಕೆಲಸ ಮಾಡಿಸಿಕೊಂಡಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ ರೂಪಿಸಿರುವ ನಿಯಮಾವಳಿಗಳಡಿ ಅನುಸರಿಸಬೇಕಾದ ಸಾಮಾನ್ಯ ತತ್ವಗಳನ್ನು ಅನುಸರಿಸದೇ ಸರ್ಕಾರಿ ಕರ್ತವ್ಯ ದುರುಪಯೋಗಪಡಿಸಿಕೊಳ್ಳಲಾಗಿದೆ. ಹಾಗಾಗಿ ಇವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುದ್ದ ಪಂಚಾಯಿತಿ ಸಿಬ್ಬಂದಿ ನಿರ್ಭೀತಿಯಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ವಾಟರ್‌ಮನ್, ಸ್ವಚ್ಛತಾಗಾರರು, ಇತರೆ ಸಿಬ್ಬಂದಿಯನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಬಾಕಿ ಇರುವ ಉಪಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಬಾಕಿ ವೇತನ ನೀಡಬೇಕು. ಇಎಫ್‌ಎಂಎಸ್ ಹಾಜರಾತಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಪಿಡಿಒ ಸಿಬ್ಬಂದಿಗೆ ಸಂಬಳ ಕೊಡದೇ ಸತಾಯಿಸುವುದನ್ನು ನಿಲ್ಲಿಸಬೇಕು. ಹಿರಿತನದ ಆಧಾರದ ಮೇಲೆ ಪಂಚಾಯಿತಿಯಲ್ಲಿ ಬಡ್ತಿ ನೀಡುವುದು ಮುಖ್ಯವಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಬಸವರಾಜು, ಕೆ.ಎನ್.ಆನಂದ್‌ರಾವ್, ರಾಜಶೇಖರ್, ಬೋರೇಗೌಡ, ಪುಟ್ಟಸ್ವಾಮಿ ಇದ್ದರು.