

ಕಾರಟಗಿ: ತಾಲೂಕಿನ ಬೂದಗುಂಪಾ ಗ್ರಾಪಂ ಅಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಶನಿವಾರ ಸಂಜೆ ನಡೆದ ವಾಗ್ವಾದ ಬೂದಿಮುಚ್ಚಿದ ಕೆಂಡದಂತಾಗಿದ್ದು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಇತ್ತೀಚೆಗೆ ಗ್ರಾಪಂ ಅಧ್ಯಕ್ಷರ ಆಯ್ಕೆಗೆ ಮೀಸಲಾತಿ ಘೋಷಣೆಯಾಗಿದ್ದು, ಎಸ್ಟಿ ಮಹಿಳೆಗೆ ನಿಗದಿಯಾಗಿತ್ತು. ಒಂದು ಗುಂಪಿನವರು ಇದನ್ನು ಆಕ್ಷೇಪಿಸಿದ್ದಾರೆ. ಮನಸ್ತಾಪ ಉಂಟಾಗುತ್ತಿದ್ದಂತೆ ಒಂದು ಗುಂಪಿನವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ತೀರ್ಪು ನೀಡಿದ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಗಿ ಮಾತಿನ ಚಕಮಕಿ ತಾರಕಕ್ಕೇರಿ ಮಾರಾಮಾರಿಗೆ ಮುಂದಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪಿಐ ಸಿದ್ರಾಮಯ್ಯ ಹಿರೇಮಠ ನೇತೃತ್ವದ ಪೊಲೀಸರ ತಂಡ ಪರಿಸ್ಥಿತಿ ತಿಳಿಗೊಳಿಸಿದೆ. ಆದರೆ, ಇಡೀ ಊರು ಬೂದಿ ಮುಚ್ಚಿದ ಕೆಂಡದಂತಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಪೊಲೀಸರು ಒಟ್ಟು 30ಕ್ಕೂ ಹೆಚ್ಚು ಜನರ ಮೇಲೆ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು ಈಗಾಗಲೇ 8 ಜನರನ್ನು ಬಂಧಿಸಿದ್ದಾರೆ. ಘಟನೆ ತಿಳಿಗೊಳಿಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಮಹೆಬೂಬ್ ಅಲಿಯಾಸ್ ಬೆಂಕಿ ಎಂಬಾತನ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಗಾಮಕ್ಕೆ ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶ ಕುಮಾರ, ಪ್ರಭಾರಿ ಎಸ್ಪಿ ಶ್ರೀಹರಿ ಬಾಬು, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 2 ಐಆರ್‌ಬಿ ಮತ್ತು 2 ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.