

ಜಗದೀಶ ಹೊಂಬಳಿ ಬೆಳಗಾವಿ
ಗ್ರಾಮ ಪಂಚಾಯಿತಿ ಅಭಿವೃದಿಟಛಿ (ಪಿಡಿಒ) ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಚಕ್ಕರ್ ಹಾಕುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಇ-ಹಾಜರಾತಿ ಜಾರಿಗೆ ತಂದು ಮೂಗುದಾರ ಹಾಕಿದೆ.ಪಂಚಾಯತ್ ರಾಜ್ ಇಲಾಖೆಯಿಂದ ಕಂಪ್ಯೂಟರ್ ಆಧಾರಿತ ಇ-ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಈ ಮೊದಲು ಯೋಮೆಟ್ರಿಕ್ ಆಧಾರಿತ ಇ-ಹಾಜರಾತಿ ಕಡ್ಡಾಯಗೊಳಿಸಲಾಗಿತ್ತಾದರೂ ಪರಿಣಾಮಕಾರಿಯಾಗಿರಲಿಲ್ಲ. ಆರಂಭದಲ್ಲಿ ಬಯೋಮೆಟ್ರಿಕ್ ಬೆರಳಚ್ಚು ಹಾಕಿದ್ದ ಸಿಬ್ಬಂದಿ ನಂತರ ಬಯೋಮೆಟ್ರಿಕ್ ಯಂತ್ರಗಳನ್ನೇ ಕಿತ್ತು ಹಾಕಿದ ಬಗ್ಗೆ ವರದಿಯಾಗಿದ್ದವು. ಬಹುತೇಕ ಗ್ರಾಪಂಗಳಲ್ಲಿ ಇದುವರೆಗೂ ಬಯೋಮೆಟ್ರಿಕ್ ಇ-ಹಾಜರಾತಿ ವ್ಯವಸ್ಥೆ ಇಲ್ಲವಾಗಿತ್ತು. ಕರೊನಾ ಸಂದರ್ಭದಲ್ಲಿ ಇ-ಹಾಜರಾತಿ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಹೊಸವರ್ಷದ ಮೊದಲ ದಿನದಿಂದಲೇ ಇ-ಹಾಜರಾತಿ ಜಾರಿಗೊಳಿಸಿರುವುದು ಅಧಿಕಾರಿ, ಸಿಬ್ಬಂದಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಪಂಚಾಯಿತಿ ಆಡಳಿತ ವ್ಯವಸ್ಥೆ ಜನಪರಗೊಳಿಸಲು ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಗ್ರಾಪಂ ಸಿಬ್ಬಂದಿ ಪ್ರತಿದಿನ ಹಾಜರಾತಿ ನಮೂದಿಸಲು ಪಂಚತಂತ್ರ 2.0 ತಂತ್ರಾಂಶದಲ್ಲಿ ಇ-ಹಾಜರಾತಿ ಮಾಡ್ಯೂಲ್‌ನಲ್ಲಿ ಅನುಷ್ಠಾನಗೊಳಿಸಲಾಗಿದೆ. ಗ್ರಾಪಂ ಸಿಬ್ಬಂದಿ ಮಾಸಿಕ ವೇತನ ಪಂಚತಂತ್ರ 2.0 ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಲಾಗುತ್ತಿದೆ.
ಈಗಾಗಲೇ ಗ್ರಾಪಂ ಸಿಬ್ಬಂದಿ ಪಂಚತಂತ್ರ 2.0 ತಂತ್ರಾಂಶ ಮತ್ತು ಮೊಬೈಲ್ ಆ್ಯಪ್ ಮೂಲಕ ಇ-ಹಾಜರಾತಿ ಅಳವಡಿಸಲು ನಿರ್ದೇಶನ ನೀಡಿದ್ದರೂ ಹಲವಾರು ಗ್ರಾಪಂಗಳಲ್ಲಿ ನಿಯಮಿತವಾಗಿ ಅಳವಡಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಗ್ರಾಪಂ ಸಿಬ್ಬಂದಿಯ ಇ-ಹಾಜರಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಪಂಚತಂತ್ರ 2.0 ತಂತ್ರಾಂಶ ಮತ್ತು ಎಚ್‌ಆರ್‌ಎಂಎಸ್ ಮಾಡ್ಯೂಲ್‌ಗಳನ್ನು ಲಿಂಕ್ ಮಾಡಲಾಗಿದೆ. ಜನವರಿಯಿಂದಲೇ ವೇತನ ಪಾವತಿಗೆ ಇ-ಹಾಜರಾತಿ ಪರಿಗಣಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಎಲ್ಲ ಇಲಾಖೆಗೂ ಆಗಲಿ: ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಇ-ಹಾಜರಾತಿ ಜಾರಿ ಮಾಡುವ ಮೂಲಕ ಇ-ಹಾಜರಾತಿ ಆಧಾರದಲ್ಲಿಯೇ ವೇತನ ಪಾವತಿ ನಿಯಮ ಜಾರಿ ಮಾಡಬೇಕೆಂಬುದು ಪ್ರಜ್ಞಾವಂತರ ಮನವಿಯಾಗಿದೆ. ಬಹುತೇಕ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಬರುವ ಸಮಯವನ್ನೇ ಮರೆತಿದ್ದಾರೆ. ಕೆಲವರು ಕಚೇರಿಗೆ ಬಂದು ಬಾಗಿಲು ತೆಗೆದು ಹೋದವರು ಮಧ್ಯಾಹ್ನ ಮರಳುತ್ತಾರೆ. ದಿನವೂ ಬೆಳಗ್ಗೆ, ಮಧ್ಯಾಹ್ನ, ಸಂಜೆ ಸಮಯದಲ್ಲಿ ಇ-ಹಾಜರಾತಿ ಕಡ್ಡಾಯಗೊಳಿಸಿದರೆ, ಸಿಬ್ಬಂದಿ ಎಷ್ಟರಮಟ್ಟಿಗೆ ಕಚೇರಿಯಲ್ಲಿಯೇ ಉಳಿಯುತ್ತಾರೆ ಎಂಬುದು ಸರ್ಕಾರಕ್ಕೆ ಖಾತ್ರಿಯಾಗುತ್ತದೆ. ಜನರು ಕೆಲಸ ಕಾರ್ಯಗಳಿಗೆ ಬಂದಾಗ, ಅಧಿಕಾರಿ, ಸಿಬ್ಬಂದಿ ಸ್ಪಂದಿಸಲು ಅವಕಾಶ ಸಿಗಲಿದೆ ಎನ್ನುವುದು ನಾಗರಿಕರ ಆಶಯ.
ಜಿಪಂ ಸಿಇಒ ಪ್ರತಿಕ್ರಿಯೆ:
ಜನರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಗ್ರಾಪಂ ಸಿಬ್ಬಂದಿಗೆ ಇ-ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಮೊದಲು ಈ ವ್ಯವಸ್ಥೆ ಜಾರಿಗೆ ತರಲಾಗಿತ್ತಾದರೂ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಈಗ ಮತ್ತೆ ಆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇ-ಹಾಜರಾತಿ ಅನುಸರಿಸಿ ವೇತನ ಪಾವತಿ ಜಾರಿಯಾಗಲಿದೆ ಎಂದು ಜಿಪಂ ಸಿಇಒ ಹರ್ಷಲ್ ಭೋಯರ್ ಪ್ರತಿಕ್ರಿಯೆ ನೀಡಿದ್ದಾರೆ.