ಆಯಿಷ್‌ನಲ್ಲಿ ವಿಶೇಷ ಮಕ್ಕಳಿಗೆ ಪದವಿ ಪ್ರದಾನ ಸಂಭ್ರಮ

Graduation ceremony for special children in AIISH
Published on

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ವಿಶೇಷ ತರಬೇತಿ ಪಡೆದ ವಿಶೇಷ ಮಕ್ಕಳಿಗೆ ಮಂಗಳವಾರ ಆಯಿಷ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಪೂರ್ವ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯಗಳು ಹಮ್ಮಿಕೊಳ್ಳುವ ಘಟಿಕೋತ್ಸವದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳು ಧರಿಸುವ ಕಪ್ಪು ನಿಲುವಂಗಿ ಹಾಗೂ ಕ್ಯಾಪ್‌ಅನ್ನು ಈ ಪುಟ್ಟಮಕ್ಕಳು ಸಹ ಧರಿಸಿ ಗಮನ ಸೆಳೆದರು. ಈ ಬಾರಿ ಒಟ್ಟು 162 ಮಕ್ಕಳಿಗೆ ಶಾಲಾ ಪೂರ್ವ ತರಬೇತಿ ನೀಡಲಾಗಿದ್ದು, ಈ ಪೈಕಿ 149 ಮಕ್ಕಳು ಖುದ್ದಾಗಿ ಹಾಜರಾಗಿ ಪದವಿ ಸ್ವೀಕರಿಸಿದರು. 13 ಮಕ್ಕಳು ವಿವಿಧ ಕಾರಣಗಳಿಂದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.

ಆಯಿಷ್ ವಿಶೇಷ ಶಿಕ್ಷಣ ವಿಭಾಗದಿಂದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ 3 ವರ್ಷದ ಅವಧಿಯ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸುವ ವಿಶೇಷ ಮಕ್ಕಳು ಸಾಮಾನ್ಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಅರ್ಹತೆ ಪಡೆಯುತ್ತಾರೆ. ಈ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸಾಮಾನ್ಯ ಶಾಲೆಯಲ್ಲಿ 1ನೇ ತರಗತಿಗೆ ಸೇರ್ಪ ಡೆಗೊಳ್ಳಲಿದ್ದಾರೆ.

ಮೂರು ವರ್ಷಗಳ ತರಬೇತಿ ಅವಧಿಯಲ್ಲಿ ಈ ಮಕ್ಕಳಿಗೆ ಸಾಮಾನ್ಯ ಮಕ್ಕಳಂತೆ ಕಲಿಯುವ ತರಬೇತಿ ನೀಡಲಾಗಿದೆ. ಅಲ್ಲದೆ ಎಲ್‌ಕೆಜಿ, ಯುಕೆಜಿಯಲ್ಲಿ ದೊರೆಯುವ ಶಿಕ್ಷಣವನ್ನು ನೀಡಲಾಗಿದೆ. ಶ್ರವಣ ನ್ಯೂನತೆ, ಬುದ್ಧಿಮಾಂದ್ಯತೆ ಸೇರಿದಂತೆ ಬಹುವಿಧ ನ್ಯೂನತೆ ಹೊಂದಿರುವ ಮಕ್ಕಳಿಗೆ ತರಬೇತಿ ನೀಡಲಾಗಿದೆ. ತರಬೇತಿ ಪೂರ್ಣಗೊಳಿಸಿ ಮಕ್ಕಳು ಪದವಿ ಪ್ರಮಾಣ ಪತ್ರ ಸ್ವೀಕರಿಸುವಾಗ ಪಾಲಕರ ಮೊಗದಲ್ಲಿ ಸಂಭ್ರಮ ಮನೆ ಮಾಡಿಕೊಂಡಿತ್ತು. ಎಲ್ಲರು ಮೊಬೈಲ್‌ಗಳಿಂದ ತಮ್ಮ ಮಕ್ಕಳ ಫೋಟೋ ಸೆರೆ ಹಿಡಿದು ಸಂಭ್ರಮಿಸಿದರು.

ಮಕ್ಕಳಿಗೆ ಪದವಿ ಪ್ರದಾನ ಮಾಡಿದ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲರೀಕರಣ ನಿರ್ದೇಶನಾಲಯದ ಉಪ ನಿರ್ದೇಶಕಿ ಸಿ. ಅಶ್ವತ್ಥಮ್ಮ ಮಾತನಾಡಿ, ಅಂಗವಿಕಲ ಹಾಗೂ ವಿಶೇಷ ಮಕ್ಕಳಿಗೋಸ್ಕರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಮಾತನಾಡಿ, ಮಗು ಚೆನ್ನಾಗಿದ್ದರೆ ಆ ಮಗು ನನ್ನದು ಎಂದು ಎಲ್ಲರು ಹೇಳುತ್ತಾರೆ. ಆದರೆ, ಮಕ್ಕಳಲ್ಲಿ ಸಮಸ್ಯೆಗಳು ಎದುರಾದರೆ ಆ ಮಗು ನಿನ್ನದು ಅನ್ನುತ್ತಾರೆ. ವಿಶೇಷ ಮಕ್ಕಳ ಆರೈಕೆಯು ಕೇವಲ ಮಹಿಳೆಯರ ಜವಾಬ್ದಾರಿ ಮಾತ್ರವಲ್ಲ, ಪುರುಷರು ಸಹ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಲ್ಲಿ ತರಬೇತಿ ಪಡೆದ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ತಕ್ಷಣ ಆಯಿಷ್ ಸಂಸ್ಥೆಯನ್ನು ಸಂಪರ್ಕಿಸಿ. ಈ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಪ್ರವೇಶ ದೊರೆಯದೆ ಇದ್ದರೆ ನಮಗೆ ಮಾಹಿತಿ ನೀಡಿ, ನಾವು ಸಾಮಾನ್ಯ ಶಾಲೆಗಳ ಶಿಕ್ಷಕರ ಜತೆಗೆ ಮಾತುಕತೆ ನಡೆಸಿ ಪ್ರವೇಶ ಕೊಡಿಸುತ್ತೇವೆ ಎಂದು ಹೇಳಿದರು.

ಮಕ್ಕಳು ಯಾಕೆ ಈ ರೀತಿ ಆಯಿತು ಎಂದು ಕೂತು ಯೋಚನೆ ಮಾಡಿ ಪ್ರಯೋಜನವಿಲ್ಲ. ವಿಶೇಷ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಸಾಮಾನ್ಯ ಮಕ್ಕಳ ರೀತಿಯಲ್ಲಿ ರೂಪಿಸಲು ಶ್ರಮಿಸಬೇಕು. ಇಲ್ಲಿ ತರಬೇತಿ ಪಡೆದು ಮಕ್ಕಳು ಮುಂದೆ ಉತ್ತಮ ಸಾಧನೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಆಯಿಷ್ ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೀತಿ ವೆಂಕಟೇಶ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜ್ಯೋತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net