ಆಯುರ್ವೇದ ಚಿಕಿತ್ಸೆಯಿಂದ ಕ್ಯಾನ್ಸರ್ ನಿವಾರಣೆ ಸಾಧ್ಯ : ಡಾ.ರಾಘವೇಂದ್ರ ರಾವ್ ಮಾಹಿತಿ

New Project (25)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ ಮೊದಲಾದ ಪದ್ಧತಿಗಳನ್ನು ಅನುಸರಿಸುವ ಮೂಲಕ ಕ್ಯಾನ್ಸರ್ ಕಾಯಿಲೆ ಗುಣಪಡಿಪಡಿಸಲು ಸಾಧ್ಯವಿದೆ. ಸಿನಿಮಾಗಳಲ್ಲಿ ತೋರಿಸುವಂತೆ ಕ್ಯಾನರ್ ರೋಗಿಯು ರಕ್ತಕಾರುವುದು ಸುಳ್ಳು. ಇಂತಹ ದೃಶ್ಯಗಳಿಂದ ರೋಗಿ ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತಾನೆ ಎಂದು ನವದೆಹಲಿ ಕೇಂದ್ರ ಆಯುಶ್ ಸಚಿವಾಲಯದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಂಶೋಧನಾ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.

ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಗಳ ಆಡಳಿತ ತಲಪಾಡಿ ದೇವಿಪುರದಲ್ಲಿರುವ ಶಾರದಾ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ತಲಪಾಡಿ ಕ್ಯಾಂಪಸ್‌ನಲ್ಲಿರುವ ಭೂವರಾಹ ಸಭಾಂಗಣದಲ್ಲಿ ಶನಿವಾರ ಆಯೋಜನೆಗೊಂಡ ವಿಶಿಖಾನುಪ್ರವೇಶ ಪದವಿಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ದೇಶದಲ್ಲಿ ಸಾವಿರಾರು ಬಗೆಯ ಚಿಕಿತ್ಸಾ ಪದ್ಧತಿಗಳಿವೆ. ಅವೆಲ್ಲವೂ ರೋಗ ವಾಸಿ ಮಾಡುವ ಜತೆ ರೋಗಿಯಲ್ಲಿ ಆತ್ಮಸ್ಥೈರ್ಯ ತುಂಬಿ ಬದುಕುವ ಉತ್ಸಾಹ ಹೆಚ್ಚಿಸುತ್ತವೆ. ಅಮೇರಿಕಾದಂತಹ ದೇಶವೇ ತನ್ನ ವೈದ್ಯಕೀಯ ಶಿಕ್ಷಣದಲ್ಲಿ ಯೋಗ ಶಿಕ್ಷಣ ಕಡ್ಡಾಯಗೊಳಿಸಿದೆ. ಹಾಗಾಗಿ ಪದವೀಧರರು ತಮ್ಮ ಶಿಕ್ಷಣವನ್ನು ಪದವಿಗೆ ಅಂತ್ಯಗೊಳಿಸದೆ ಸಂಶೋಧನೆಯತ್ತ ಆದ್ಯತೆ ನೀಡಬೇಕು ಎಂದರು.

ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿ, ಇದುವರೆಗೆ ಇಲ್ಲಿ ಶಿಕ್ಷಣ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ದೇಶ ಪ್ರೇಮ ಮೂಡಿಸಲಾಗಿದೆ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನಿವೃತ ಪ್ರಾಧ್ಯಾಪಕ ಡಾ.ಮುರಳೀಧರ ಶರ್ಮ, ಸಂಸ್ಥೆಯ ನಿರ್ದೇಶಕ ಮತ್ತು ಟ್ರಸ್ಟಿ ಸಮೀರ್ ಪುರಾಣಿಕ್, ಉಪಾಧ್ಯಕ್ಷ ಡಾ.ಸೀತಾರಾಮ ಭಟ್, ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಲ್ಕೂರ, ಟ್ರಸ್ಟಿಗಳಾದ ಸೀತಾರಾಮ ಎಚ್., ಸುಧಾಕರ ಆರ್.ಪೇಜಾವರ, ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ಮೀರಾ ಜೆ.ಪಿ ಮೊದಲಾದವರು ಉಪಸ್ಥಿತರಿದ್ದರು.

ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಂದೀಪ್ ಬೇಕಲ್ ಸ್ವಾಗತಿಸಿದರು. ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಾಚಾರ್ಯ ಡಾ.ನಂದೀಶ್ ಎನ್.ಎಸ್. ವಂದಿಸಿದರು. ಡಾ.ಸ್ವರ್ಣ ಮತ್ತು ಡಾ.ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಗುರುಕುಲ ಶಿಕ್ಷಣಕ್ಕೆ ಪ್ರಸಿದ್ಧವಾಗಿದ್ದ ಭಾರತದಲ್ಲಿ ಸಂತರು, ರಾಜರು ತಮ್ಮ ಮಕ್ಕಳನ್ನು ಗುರುಕುಲಕ್ಕೆ ಕಳುಹಿಸುತ್ತಿದ್ದರು. ಜ್ಞಾನ ವೃದ್ಧಿಸುವ ಮೂಲಕ ಅವರು ಸಮಾಜಕ್ಕೆ ದೊಡ್ಡ ಕೊಡುಗೆ ಆಗುತ್ತಿದ್ದರು. ಅದೇ ಮಾದರಿಯಲ್ಲಿ ಶಾರದಾ ವಿದ್ಯಾಲಯದಲ್ಲಿ ಸಂಸ್ಕಾರ, ಸಂಸ್ಕೃತಿ, ಶಿಸ್ತನ್ನು ಶಿಕ್ಷಣದ ಜೊತೆ ಕಲಿಸಲಾಗುತ್ತಿದೆ. ಡಾ.ಎಂ.ಬಿ.ಪುರಾಣಿಕ್, ಅಧ್ಯಕ್ಷ, ಶಾರದಾ ಶಿಕ್ಷಣ ಸಂಸ್ಥೆ

101 ವಿದ್ಯಾರ್ಥಿಗಳಿಗೆ ಪದವಿಪ್ರದಾನ

ಮೂರು ಕಾಲೇಜುಗಳ 101 ವಿದ್ಯಾರ್ಥಿಗಳಿಗೆ ಪದವಿಪ್ರದಾನ ಹಾಗೂ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ನಂದಿನಿ ಜೆ.ಎಚ್ ಅವರಿಗೆ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜಿನ ವರ್ಷದ ನಾಗಾರ್ಜುನ ಪ್ರಶಸ್ತಿ, ಡಾ.ಕೆ.ಜಿ.ವರ್ಷಾ ರೈ ಅವರಿಗೆ ಶೈಕ್ಷಣಿಕ ಶ್ರೇಷ್ಠತೆಗಾಗಿ ನೀಡುವ ಪರಾಶರ ಪ್ರಶಸ್ತಿ ಪ್ರದಾನಿಸಲಾಯಿತು. ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಡಾ.ಅನುಪ್ರಿಯಾ ಪಿ.ರಾವ್, ಶಾರದಾ ಕಾಲೇಜಿನಿಂದ ರಮ್ಯಶ್ರೀ ಹಾಗೂ ಶ್ರಾವ್ಯ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net