

ಮಂಡ್ಯ: ಪದವಿ ಪೂರ್ಣಗೊಳಿಸಿ ಮುಂದೆ ಉದ್ಯೋಗವನ್ನು ಎದುರು ನೋಡುತ್ತಿರುವವರು ಹಾಗೂ ಸ್ವಂತ ಉದ್ಯಮವನ್ನು ಸ್ಥಾಪಿಸಬೇಕೆಂಬ ಆಸೆ ಹೊಂದಿರುವವರು ಅನುಭವಿ ಉದ್ಯಮಿಗಳ ಮಾರ್ಗದರ್ಶನದ ಜತೆಗೆ ಸಲಹೆ ಪಡೆದುಕೊಳ್ಳಿ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಕಿವಿಮಾತು ಹೇಳಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಆಯೋಜಿಸಿದ್ದ 14ನೇ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಟೆಸ್ಟ್ ಯಂತ್ರ, ಸಾಫ್ಟ್‌ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಫೈರ್ ಪಿಂಕ್ ಮತ್ತು ಕ್ಯೂಸೈಡರ್ಸ್ ಮತ್ತು ಡೆಸ್ಟೇಡರ್ಸ್ ಕಂಪನಿಯ ಸಹ ಸಂಸ್ಥಾಪಕ ಗಿರೀಶ್ ಶಿವಣ್ಣ ಅವರು ಪಿಇಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಇಂದು ಅವರ ಕಂಪನಿ ವರ್ಷಕ್ಕೆ 1 ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಅದಕ್ಕೆ ಅವರ ಪರಿಶ್ರಮ ಕಾರಣವಾಗಿದೆ ಎಂದರು.
ಹೊಸದಾಗಿ ಕಂಪನಿ ತೆರೆಯುವ ಹುಮ್ಮಸ್ಸಿನಲ್ಲಿರುವವರು, ಗಿರೀಶ್ ಶಿವಣ್ಣ ಅವರಂತಹ ಅನುಭವಿಗಳಿಂದ ಸಲಹೆ, ಮಾರ್ಗದರ್ಶನಗಳನ್ನು ಪಡೆಯಬೇಕು. ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಪರಿಶ್ರಮ ಹಾಕಿದರೆ ಯಾವುದೇ ಉದ್ಯಮದಲ್ಲಿ ಯಶಸ್ವಿಯಾಗಬಹುದು. ಇನ್ನು ನೀವು ಮುಂದೆ ಎಷ್ಟೆ ಎತ್ತರಕ್ಕೆ ಬೆಳೆದರೂ ಹುಟ್ಟಿದ ಊರು, ತಂದೆ-ತಾಯಿ ಹಾಗೂ ನೀವು ಕಲಿತ ವಿದ್ಯಾಸಂಸ್ಥೆಯನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.
ಉದ್ಯಮಿ ಗಿರೀಶ್ ಶಿವಣ್ಣ ಪದವೀಧರರಿಗೆ ಸಲಹೆಗಳನ್ನು ನೀಡಿದರು. ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಶೈಕ್ಷಣಿಕ ಡೀನ್ ಡಾ.ಬಿ.ದಿನೇಶ್ ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ.ಮಹೇಂದ್ರಬಾಬು, ಶೈಕ್ಷಣಿಕ ಉಪ ಡೀನ್ ಡಾ.ಡಿ.ಆರ್.ಉಮೇಶ್, ಉಪ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 722 ಪದವಿ ವಿದ್ಯಾರ್ಥಿಗಳು ಹಾಗೂ 133 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 8 ಪದವಿ ಮತ್ತು 5 ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.