ಭಾರತದ ಸಾಧನೆಗೆ ವಿಶ್ವದೆಲ್ಲೆಡೆ ಶ್ಲಾಘನೆ: ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ ಹೇಳಿಕೆ

Graduation ceremony at PES College Mandya
Published on

ಮಂಡ್ಯ: ಭಾರತ ಡಿಜಿಟಲ್ ತಾಂತ್ರಿಕತೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ಕ್ಯೂ ಆರ್ ಕೋಡ್ ಬಳಸಿ ವ್ಯವಹಾರ ಮಾಡುವಷ್ಟರ ಮಟ್ಟಿಗೆ ತಾಂತ್ರಿಕತೆಯಲ್ಲಿ ಸಾಧನೆ ಮಾಡಿರುವುದಕ್ಕೆ ವಿಶ್ವವೇ ಶ್ಲಾಘಿಸುವಂತಾಗಿದೆ. ಇದಕ್ಕೆಲ್ಲ ತಾಂತ್ರಿಕ ಶಿಕ್ಷಣ ಪಡೆದವರಿಂದ ಸಾಧ್ಯವಾಗಿದೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ ಅಭಿಪ್ರಾಯಿಸಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಜನತಾ ಶಿಕ್ಷಣ ಟ್ರಸ್ಟ್(ಪಿಇಟಿ)ನಿಂದ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ 16ನೇ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನಮ್ಮ ರಾಷ್ಟ್ರದಲ್ಲಿ ಪ್ರಸ್ತುತ ಶೇ.80ರಷ್ಟು ಜನ ಸುಶಿಕ್ಷಿತರಿದ್ದಾರೆ. ತಾಂತ್ರಿಕತೆಯಲ್ಲಿ ಸಾಧನೆ ಮಾಡುತ್ತಿರುವ ನಡುವೆ ಸರ್ಕಾರ ಯುಪಿಐಯನ್ನು ಜಾರಿಗೊಳಿಸಿ ಡಿಜಿಟಲ್ ಕ್ರಾಂತಿಯನ್ನು ಉಂಟು ಮಾಡಿತ್ತು. ಕಾರಣ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಎಲ್ಲರೂ ಯುಪಿಐ ಉಪಯೋಗಿಸುವ ಮೂಲಕ ಹಣ ಪಡೆದು, ಪಾವತಿಯಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಈ ದೇಶ ವಿಕಸಿತ ಭಾರತವಾಗಬೇಕಾದರೆ ಪದವೀಧರರಾದ ಎಲ್ಲರೂ ದೇಶಕ್ಕೆ ಕೊಡುಗೆ ನೀಡುವುದನ್ನು ರೂಢಿಸಿಕೊಳ್ಳಬೇಕು. ನಶಾ ಮುಕ್ತ ಭಾರತವನ್ನು ನಿರ್ಮಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಕಲ್ಪ ಮಾಡಿದ್ದಾರೆ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಭಾರತದಲ್ಲಿ 36.06 ಕೋಟಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 4.50 ಕೋಟಿ ಉನ್ನತ ಶಿಕ್ಷಣದಲ್ಲಿದ್ದರೆ, 1.50 ಕೋಟಿ ಐಟಿಐ ಕೌಶಲ ತರಬೇತಿ ಶಿಕ್ಷಣದಲ್ಲಿದ್ದಾರೆ. ಶೇ.94ರಷ್ಟು ಮಕ್ಕಳನ್ನು ಶಾಲಾ ಹಂತದಲ್ಲಿ ದಾಖಲಿಸಲಾಗುತ್ತದೆ. ಒಟ್ಟಾರೆ ಹೆಚ್ಚು ಜನ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದಕ್ಕೆ ಶಿಕ್ಷಣದ ಹಕ್ಕು ಮತ್ತು ಬಿಸಿಯೂಟ ಯೋಜನೆಯೂ ಕಾರಣವಾಗಿದೆ. 2015ರಲ್ಲಿ ಶೇ.94ರಷ್ಟು ಮಕ್ಕಳು ಕಲಿಯುತ್ತಿದ್ದರು. ಇದು ಮತ್ತಷ್ಟು ಹೆಚ್ಚಾಗಿದೆ. ಇಷ್ಟು ಮಕ್ಕಳು ಮುದೆ ಏನು ಕಲಿಯಬೇಕು. ಇಂಜಿನಿಯರ್, ವೈದ್ಯರೇ ಆಗಬೇಕೆಂದೇನೂ ಇಲ್ಲ. 4.50 ಕೋಟಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಾಲಿಸುತ್ತಿದ್ದಾರೆ. ಈಗಿರುವ ಮಕ್ಕಳಿಗೆ 1,200 ವಿಶ್ವವಿದ್ಯಾಲಯಗಳಿವೆ. 45 ಸಾವಿರ ಉನ್ನತ ಶಿಕ್ಷಣ ಕಾಲೇಜುಗಳಿವೆ. ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರವೂ ನಮ್ಮದಾಗಿದೆ ಎಂದು ತಿಳಿಸಿದರು.

ಬೆಂಗಳೂರು-ಮೈಸೂರು ಮಧ್ಯದಲ್ಲಿರುವ ಮಂಡ್ಯ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿದೆ. ನಿತ್ಯ ಸಚಿವರೆಂದೇ ಹೆಸರಾಗಿದ್ದ ಕೆ.ವಿ.ಶಂಕರಗೌಡರು ಗ್ರಾಮೀಣ ಭಾಗದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿ ಲಕ್ಷಾಂತರ ಜನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಭಾರತದಲ್ಲಿ ವಿದ್ಯೆಗೆ ಕೊಡುವಂತಹ ಬೆಲೆ ಬೇರೆಲ್ಲೂ ಸಿಗುವುದಿಲ್ಲ. ನಮ್ಮ ದೇಶ ಆಧುನೀಕತೆಯೆಡೆಗೆ ಸಾಗುತ್ತಿದ್ದರೂ, ಪಾಲಕರು ನಮ್ಮ ಮಕ್ಕಳು ಇಂಜಿನಿಯರ್ ಅಥವಾ ವೈದ್ಯರಾಗಬೇಕೆಂಬ ಹಂಬಲದೊಂದಿಗೆ ಮಕ್ಕಳಿಗೆ ವಿದ್ಯೆ ಕಲಿಸುತ್ತಾರೆ. ಮಕ್ಕಳು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ದೊಡ್ಡ ದೊಡ್ಡ ಹುದ್ದೆಗೆ ಹೋಗಬೇಕು. ಆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಶಿಸ್ತು ಮತ್ತು ಕಠಿಣ ಪರಿಶ್ರಮವೇ ಯಶಸ್ಸಿಗೆ ದಾರಿಯಾಗಿದೆ. ಪದವೀಧರರು ತಮ್ಮ ವೃತ್ತಿ ಜೀವನದಲ್ಲಿಯೂ ಈ ಮೌಲ್ಯಗಳನ್ನು ಪಾಲಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತಿನ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಪದವಿ ಪ್ರಮಾಣ ಪತ್ರ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಲ್. ಮುರಳಿಕೃಷ್ಣ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಡಿ.ಆರ್.ಉಮೇಶ್, ಡೀನ್ ಡಾ.ರುದ್ರೇಶಿ ಅಡ್ಡಮಣಿ ಇತರರಿದ್ದರು.

Graduation ceremony at PES College

ಹನ್ನೊಂದು ಸಾಧಕರಿಗೆ ಚಿನ್ನದ ಗರಿ

ಕಾಲೇಜಿನ ಯು.ಜಿ ಎಂಟು ವಿಭಾಗದಿಂದ 673 ಹಾಗೂ ಪಿ.ಜಿ ಐದು ವಿಭಾಗದಿಂದ 128 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 801 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಯು.ಜಿ ವಿಭಾಗದಲ್ಲಿ 53 ಹಾಗೂ ಪಿ.ಜಿ ವಿಭಾಗದಲ್ಲಿ 15 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದಾರೆ. ಈ ಪೈಕಿ ಯು.ಜಿ ವಿಭಾಗದಿಂದ 6 ಮತ್ತು ಪಿ.ಜಿ ವಿಭಾಗದಿಂದ 5 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪಡೆದಿದ್ದರು.

ಈ ಪೈಕಿ ಯು.ಜಿ ವಿಭಾಗದಲ್ಲಿ ಎಂ.ಎಸ್.ವರ್ಷಿತಾ(ಸಿವಿಲ್ ಇಂಜಿನಿಯರಿಂಗ್), ಕೆ.ಕಾರ್ತಿಕ್ ನಾರಾಯಣ್(ಕಂಪ್ಯೂಟರ್ ಸೈನ್ಸ್), ಸಿ.ಎಂ.ಹರ್ಷಿತಾ(ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್), ಎಚ್.ಎಸ್.ವಿದ್ಯಾಶ್ರೀ(ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್), ಕೆ.ಎಸ್.ಸೌಮ್ಯಾ(ಇನ್ಫರ್ಮೇಷನ್ ಸೈನ್ಸ್), ಎಂ.ವಿ.ದೀಕ್ಷಿತ್(ಮೆಕ್ಯಾನಿಕಲ್) ಮತ್ತು ಪಿ.ಜಿ ವಿಭಾಗದಲ್ಲಿ ಟಿ.ಆರ್.ವಿಸ್ಮಯ(ಮಾಸ್ಟರ್ ಆಫ್ ಟೆಕ್ನಾಲಜಿ-ಕ್ಯಾಡ್ ಆಫ್ ಸ್ಟ್ರಚರ್), ಎಸ್.ಮಾನಸಾ(ಮಾಸ್ಟರ್ ಆಫ್ ಟೆಕ್ನಾಲಜಿ-ಕಂಪ್ಯೂಟರ್ ಸೈನ್ಸ್), ಎಂ.ಎಸ್.ಅಶ್ವಿನಿ(ಮಾಸ್ಟರ್ ಆಫ್ ಟೆಕ್ನಾಲಜಿ-ಇ ಆ್ಯಂಡ್ ಸಿಇ), ಎ.ಪಿ.ಚಂದನಾ(ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್), ಎಂ.ಆರ್.ಹರಿಣಿ(ಮಾಸ್ಟರ್ ಆಫ್ ಬಿಸೆನೆಸ್ ಅಡ್ಮಿನಿಸ್ಟ್ರೇಷನ್) ಇವರಿಗೆ ಚಿನ್ನದ ಪದಕ ನೀಡಲಾಯಿತು. ಅಂತೆಯೇ ಟಾಪರ್‌ಗಳಾದ ಸಿ.ಎಂ.ಹರ್ಷಿತಾ(ಬಿಇ ಪ್ರೋಗ್ರಾಂ), ಎ.ಪಿ.ಚಂದನಾ(ಎಸಿಎ ಪ್ರೋಗ್ರಾಂ) ಮತ್ತು ಎಂ.ಆರ್.ಹರಿಣಿ(ಎಂಬಿಎ ಪ್ರೋಗ್ರಾಂ) ಅವರಿಗೆ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಹೆಸರಿನಲ್ಲಿ ತಲಾ 5 ಸಾವಿರ ರೂ ನಗದಿನ ಜತೆಗೆ ಚಿನ್ನದ ಪದಕ ಕೊಡಲಾಯಿತು.

ನಾನೂ ಸಹ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿ ನಂತರ ತಾಂತ್ರಿಕ ಶಿಕ್ಷಣವನ್ನು ಪಡೆದು ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದೇನೆ. ಜತೆಗೆ ಪ್ರತಿಷ್ಠಿತ ಪಿಇಎಸ್ ತಾಂತ್ರಿಕ ಕಾಲೇಜಿನ ಬೆಳವಣಿಗೆಯನ್ನೂ ನೋಡಿಕೊಂಡೇ ಬಂದಿದ್ದೇನೆ. ಈ ಸಂಸ್ಥೆಯಲ್ಲಿ ಶಿಕ್ಷಣ ಕಲಿತ ಎಷ್ಟೋ ಜನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಮೆಚ್ಚುಗೆ ವಿಷಯ. ಪ್ರೊ.ಟಿ.ಜಿ.ಸೀತಾರಾಂ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net