

ಮಂಡ್ಯ: ಯುವ ಸಮುದಾಯದ ದೇಶ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್(ಪಿಇಟಿ) ವತಿಯಿಂದ ಆಯೋಜಿಸಿದ್ದ 15ನೇ ಪದವಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಹಂತದಲ್ಲಿಯೇ ಸೇವಾ ಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಸಮಾಜಕ್ಕೂ ಒಳಿತಾಗುವುದರ ಜತೆಗೆ ಹಲವರಿಗೆ ಸಹಕಾರಿಯಾಗಲಿದೆ ಎಂದರು.
ಪದವಿ ಮುಗಿದ ನಂತರ ಎಲ್ಲರೂ ವೃತ್ತಿಯ ಹುಡುಕಾಟದಲ್ಲಿ ನಿರತರಾಗುತ್ತೀರಿ. ಆದರೆ ಈ ಪ್ರಯತ್ನದಲ್ಲಿ ಕೆಲವರಿಗೆ ಕೆಲಸ ಸಿಗುತ್ತದೆ. ಅದೇ ರೀತಿ ಇನ್ನೂ ಕೆಲವರು ಸ್ವಉದ್ಯೋಗ ಅವಲಂಭಿಸುತ್ತಾರೆ. ಏನೇ ಆದರೂ ನೀವು ಕಲಿತ ಶಿಕ್ಷಣ ಸಂಸ್ಥೆಗೆ ಯಾವಾಗಲೂ ಋಣಿಯಾಗಿರಬೇಕು. ಬದುಕು ರೂಪಿಸಿಕೊಟ್ಟ ಸಂಸ್ಥೆಯನ್ನು ಮರೆಯಬಾರದು. ಮಾತ್ರವಲ್ಲದೆ ಪಾಲಕರಿಗೆ ಕೀರ್ತಿ ತರುವಂತಹ ಸಾಧನೆ ಮಾಡಿ ತೋರಿಸಬೇಕು ಎಂದು ಸಲಹೆ ನೀಡಿದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಪಾಲಕರು ತಮಗೆ ಎಷ್ಟೇ ನೋವಿದ್ದರೂ ಕಷ್ಟಪಟ್ಟು ನಿಮ್ಮನ್ನು ಓದಿಸಿದ್ದಾರೆ. ನಿಮ್ಮನ್ನು ದಾಖಲಾತಿ ಮಾಡಿಸಲು ಕಾಲೇಜಿಗೆ ಬರುವಾಗ ಅವರ ಶ್ರಮ ಕಾಣಿಸುತ್ತದೆ. ಅದೆಲ್ಲವನ್ನೂ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ವ್ಯಾಸಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸ್ವಂತ ಬದುಕು ಕಟ್ಟಿಕೊಳ್ಳುವತ್ತಾ ಹೆಜ್ಜೆ ಇಡುತ್ತಿದ್ದೀರಿ. ಎಲ್ಲರಿಗೂ ಯಶಸ್ಸು ಸಿಗುವುದರ ಜತೆಗೆ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ. ಅದರ ಜತೆಗೆ ನಿಮ್ಮ ಸಲಹೆ ಮತ್ತು ಸಹಕಾರ ನಮ್ಮ ಸಂಸ್ಥೆಯ ಮೇಲಿರಲಿ ಎಂದರು.
ಸುತ್ತೂರು ಮಠ ಸಂಸ್ಥೆಯಲ್ಲಿ 15 ಸಾವಿರ ಜನ ಸಿಬ್ಬಂದಿ ಇದ್ದು, 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೆಎಸ್‌ಎಸ್ ಕಾಲೇಜುಗಳು ರಾಜ್ಯಾದ್ಯಂತ ಇವೆ. ಆ ಸಂಸ್ಥೆಯಿಂದ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಸುತ್ತೂರು ಮಠದಲ್ಲಿ ಎಲ್ಲರನ್ನೂ ಗೌರವಿಸುತ್ತಾರೆ. ಜಗದ್ಗುರು ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ ಅವರು ನಮ್ಮ ಕಾರ್ಯಕ್ರಮಕ್ಕೆ ಬಂದಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಪಿಇಟಿ ಉಪಾಧ್ಯಕ್ಷ ಬಸವಯ್ಯ, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ.ಮಹೇಂದ್ರಬಾಬು, ಡೀನ್(ಶೈಕ್ಷಣಿಕ) ಡಾ.ಬಿ.ದಿನೇಶ್ ಪ್ರಭು ಇತರರಿದ್ದರು.
799 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
15ನೇ ಘಟಿಕೋತ್ಸವದಲ್ಲಿ 799 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ವಿಭಾಗದಲ್ಲಿ 758 ವಿದ್ಯಾರ್ಥಿಗಳಿಗೆ 687 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಅಂತೆಯೇ ಸಾತ್ನಕೋತ್ತರ ವಿಭಾಗದಲ್ಲಿ 124 ವಿದ್ಯಾರ್ಥಿಗಳ ಪೈಕಿ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪದವಿ ಸ್ವೀಕರಿಸಿದರು.
ಇನ್ನು 11 ವಿಭಾಗದಲ್ಲಿ ತಲಾ ಒಬ್ಬ ಟಾಪರ್ ಚಿನ್ನದ ಪದಕ ಪಡೆದರು. ಅದರಂತೆ ಸಹನಾ(ಸಿವಿಲ್), ಕೆ.ಜೆ.ಮೋಹನಪ್ರಿಯ(ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್), ಜಿ.ಜೆ.ಸುಪ್ರಿತಾ(ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್), ಎಂ.ಆರ್.ಪ್ರಶಾಂತ್(ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್), ಬಿ.ಕೆ.ಮನೋಜ್‌ಗೌಡ(ಇನ್‌ಫರ್‌ಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್), ಎನ್.ಎಂ.ವೈಷ್ಣವಿ(ಮೆಕಾನಿಕಲ್), ಕಾದಂಬರಿ ತೆಲಿ(ಎಂ.ಟೆಕ್(ಸಿವಿಲ್ ಕ್ಯಾಡ್ ಸ್ಟ್ರಕ್ಚರ್), ಬಿ.ಕೆ.ಪ್ರಿಯಾಂಕಾ(ಎಂಬಿಎ), ಎಸ್.ಕೆ.ಅಪೂರ್ವ(ಎಂಸಿಎ), ಎನ್.ಎಂ.ವೈಷ್ಣವಿ(ಮೆಕಾನಿಕಲ್ ಇಂಜಿನಿಯರಿಂಗ್ ಸೈನ್ಸ್), ಸಹನಾ(ಸಿವಿಲ್ ಇಂಜಿನಿಯರಿಂಗ್ ಸೈನ್ಸ್) ಪದಕ ಪಡೆದುಕೊಂಡರು. ಅಂತೆಯೇ ಆರು ವಿದ್ಯಾರ್ಥಿಗಳು ವಿವಿಧ ವಿಶೇಷ ಪದಕ ಪಡೆದರು. ಜಿ.ಜೆ.ಸುಪ್ರಿತಾ(ಟಾಪರ್ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್(ಮಹಿಳಾ ವಿಭಾಗ), ಜಾಫರ್ ಸಾದಿಕ್(ಟಾಪರ್ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್(ಪುರುಷ ವಿಭಾಗ), ಕೆ.ಜೆ.ಮೋಹನಪ್ರಿಯ(ಓವರ್ ಆಲ್ ಯು.ಜಿ ಟಾಪರ್), ಬಿ.ಕೆ.ಪ್ರಿಯಾಂಕಾ(ಓವರ್ ಆಲ್ ಎಂಬಿಎ ಟಾಪರ್), ಎಸ್.ಕೆ.ಅಪೂರ್ವ(ಓವರ್ ಆಲ್ ಎಂಸಿಎ ಟಾಪರ್), ಅನುಪಮಾ(ಗಣಿತದಲ್ಲಿ ಪ್ರಥಮ ಸ್ಥಾನ 391/400). ಒಟ್ಟಾರೆ 11 ವಿಭಾಗದಲ್ಲಿ ತಲಾ 10 ವಿದ್ಯಾರ್ಥಿಗಳಂತೆ 110 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದಾರೆ.