

ಗೋಕರ್ಣ: ಇಂದಿನ ಶಿಕ್ಷಣ ವ್ಯವಸ್ಥೆ, ಅದರಲ್ಲೂ ಪ್ರಧಾನವಾಗಿ ಪದವಿ ಶಿಕ್ಷಣ ಪದ್ಧತಿ ಬಹಳವಾಗಿ ಕಲುಷಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ಮತ್ತು ನಮ್ಮ ಸಂಸ್ಕಾರ-ಸಂಸ್ಕೃತಿಗಳ ಸಮರ್ಥ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಪದವಿ ಶಿಕ್ಷಣ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಬುಧವಾರ ನಡೆದ ಮಂಗಳೂರು ಮಂಡಲದ ಕೋಳ್ಯೂರು, ಕನ್ಯಾನ, ಬಾಯಾರು ಮತ್ತು ಮುಡಿಪು ವಲಯಗಳ ಶಿಷ್ಯಭಕ್ತರ ಭಿಕ್ಷಾಸೇವೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ಅನುಗ್ರಹಿಸಿದರು.
ಇವತ್ತಿನ ಕಾಲೇಜುಗಳ ಪದವಿ ತರಗತಿಗಳಲ್ಲಿ ಯುವ ಮನಸ್ಸುಗಳು ಉತ್ತಮಗೊಳ್ಳುವ ಬದಲು ಅವುಗಳು ಕೆಡುವ ವಾತಾವರಣಕ್ಕೆ ಅವಕಾಶ ಅಧಿಕವಾಗಿದೆ. ಕಾರಣ ಯುವ ಸಮಾಜಕ್ಕೆ ಬಲಾದ ಅತ್ಯುತ್ತಮ ಶಿಕ್ಷಣ ಪದ್ಧತಿಯ ಅವಶ್ಯತೆ ಎದ್ದು ಕಾಣುತ್ತಿದೆ. ನಮ್ಮತನ, ನಮ್ಮ ಆಚಾರ-ವ್ಯವಹಾರಗಳನ್ನು ಉಳಿಸುವಲ್ಲಿ ವರ್ತಮಾನದ ಪದವಿ ಕೋರ್ಸ್ಗಳು ಸಂಪೂರ್ಣವಾಗಿ ಸೋತಿವೆ. ಈ ಪ್ರಕಾರದ ಶಿಕ್ಷಣ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಮಗ್ರ ಸಮಾಜಕ್ಕೆ ಅಪಾಯಕಾರಿಯಾಗುವ ಲಕ್ಷಣಗಳು ವಿಪುಲವಾಗಿವೆ. ಈ ಪದ್ಧತಿ ಇದೇ ನಮೂನೆಯಲ್ಲಿ ಮುಂದುವರಿದರೆ ಸಮಾಜದ ಆತ್ಮಾಭಿಮಾನಕ್ಕೆ ಭಾರಿ ಹಾನಿ ತರಬಹುದಾಗಿದೆ ಎಂದು ಅವರು ಎಚ್ಚರಿಸಿದರು.
ಸ್ವರ್ಣ ಪಾದುಕಾ ಯಾತ್ರೆ 27ರಿಂದ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಪೂರ್ಣವಾದ ಪರಿಕಲ್ಪನೆಯನ್ನು ಸಮಾಜದ ಎಲ್ಲೆಡೆ ಪ್ರಸಾರ ಮಾಡುವ ಉದ್ದೇಶದಿಂದ ಇದೇ ತಿಂಗಳ ದಿ.27ರಿಂದ ಸ್ವರ್ಣ ಪಾದುಕೆ ಸಂಚಾರ ಶುಭಾರಂಭವಾಗಲಿದೆ.ಸಂಪೂರ್ಣವಾದ ಗೋಕರ್ಣ ಮಂಡಲದಾದ್ಯಂತ ಈ ಪಾದುಕೆ ಪರಿಭ್ರಮಣ ಮಾಡಲಿದ್ದು ವಿವಿಧೆಡೆಗಳಲ್ಲಿ ಈ ಪುಣ್ಯತಮ ಪಾದುಕಾ ಪೂಜೆ ಆಯೋಜಿತವಾಗುವುದು. ಪಾದುಕೆಗೆ ಸಮರ್ಪಿತ ಎಲ್ಲ ಕಾಣಿಕೆಗಳು ವಿವಿವಿಯ ನಿರ್ವಹಣೆಗೆ ಮೀಸಲಾಗಲಿದೆ. ಇದರಿಂದ ವಿಶ್ವವಿದ್ಯಾಪೀಠದ ಭವಿಷ್ಯದಲ್ಲಿ ಸ್ವರ್ಣಪಾದುಕೆ ಸಂಚಾರ ವಿವಿವಿಯ ಆಧಾರ ಸ್ತಂಭ ಎನ್ನಿಸಲಿದೆ ಎಂದು ಶ್ರೀಗಳು ಬಣ್ಣಿಸಿದರು.
ಈ ಸಂಚಾರ ಯೋಜನೆಯ ಸಂಗಡ ಈ ವರ್ಷ ಮಾಣಿಮಠದಲ್ಲಿ ಆಯೋಜಿತವಾಗಿರುವ ವಿಶೇಷ ಸಂಭ್ರಮದ ನವರಾತ್ರಿ ಉತ್ಸವಕ್ಕೆ ಬರುವ ಎಲ್ಲ ಕಾಣಿಕೆಗಳನ್ನು ವಿಶ್ವವಿದ್ಯಾಪೀಠದಲ್ಲಿ ನಿರ್ವಿುಸಲು ಉದ್ದೇಶಿಸಲಾಗಿರುವ ವಿದ್ಯಾಧಿದೇವತೆ ಸರಸ್ವತಿಗೆ ಅರ್ಪಿತ ಬೃಹತ್ ಗ್ರಂಥಾಲಯಕ್ಕೆ ವಿನಿಯೋಗಿಸುವ ಯೋಜನೆ ರೂಪಗೊಂಡಿದೆ. ಇವೆಲ್ಲ ನವನವೀನ ನಿಸ್ವಾರ್ಥ ಸೇವೆಗಳ ಶೈಕ್ಷಣಿಕ ಯೋಜನೆಯಿಂದ ಶ್ರೀಮಠದ ಸಂಘಟನೆ ಬಲಗೊಳ್ಳಲಿದೆ. ಇದಕ್ಕೆ ಕಾರಣರಾದ ಸರ್ವರಿಗೆ ಸೇವೆಯ ಶುಭಪುಣ್ಯ ಹಾಗೂ ನೆಮ್ಮದಿಯ ಪ್ರತಿಫಲವೂ ಅನಾಯಾಸ ದೊರಕಿ ಸಮಾಜವನ್ನು ಗೆಲ್ಲುವ ಸದಾವಕಾಶ ಒದಗಿಬರಲಿದೆ ಎಂದು ಶ್ರೀಗಳು ಸಲಹೆ ನೀಡಿದರು.
ಸಭೆಯಲ್ಲಿ ವಿಶೇಷ ಸಾಧಕ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹವ್ಯಕ ಮಹಾಮಂಡಲದ ಗೌ.ಕಾರ್ಯದರ್ಶಿ ನಾಗರಾಜ ಭಟ್ಟ ಪೆದಮಲೆ, ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ ಕನ್ಯಾನ, ಶಿಷ್ಯಪ್ರಧಾನ ಗಣೇಶ ಜೋಶಿ ಸಂಕೊಳ್ಳಿ, ಮಂಗಳೂರು ಮಂಡಲಾಧ್ಯಕ್ಷ ಉದಯಶಂಕರ ನೀರ್ಪಾಜೆ, ಚಾತುರ್ವಸ್ಯ ಸಮಿತಿ ಅಧ್ಯಕ್ಷ ಯುಎಸ್ಜಿ ಭಟ್ಟ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮುಂತಾದವರಿದ್ದರು.