

ಸೊರಬ: ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರದಿಂದ ಹೊಸಬಾಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭದಲ್ಲಿದ್ದು `ಎ' ಶ್ರೇಣಿ ಪಡೆದಿರುವುದು ಸಂತಸದ ಸಂಗತಿ ಎಂದು ಸಂಘದ ಅಧ್ಯಕ್ಷ ಎಂ.ಕೆ.ಕುಮಾರ್ ಕ್ಯಾಸನೂರು ತಿಳಿಸಿದರು.
ತಾಲೂಕಿನ ಹೊಸಬಾಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಶುಕ್ರವಾರ ಮಾತನಾಡಿ, ಹೊಸಬಾಳೆ ಸಹಕಾರ ಸಂಘದಲ್ಲಿ ಒಟ್ಟು 2,115 ಸದಸ್ಯರಿದ್ದಾರೆ. ಇವರೆಲ್ಲರ ಸಹಕಾರದಿಂದ 3.61 ಕೋಟಿ ರೂ. ಠೇವಣಿ ಹಣ ಹೊಂದಿದ್ದು 20.75ಲಕ್ಷ ರೂ. ಲಾಭದಲ್ಲಿ ಕೆಲಸ ನಿರ್ವಹಿಸುತ್ತಿದೆ. ಸದಸ್ಯರು ರಸಗೊಬ್ಬರ ಸೇರಿ ಕೃಷಿ ಪರಿಕರಗಳ ಖರೀದಿಯನ್ನು ಸಂಘದಲ್ಲಿಯೇ ಮಾಡಿದ್ದಲ್ಲಿ ಸಂಘಕ್ಕೆ ಹೆಚ್ಚಿನ ಲಾಭ ದೊರೆಯಲಿದೆ ಎಂದರು.
ಡಿಸಿಸಿ ಬ್ಯಾಂಕಿನ ಕ್ಷೇತ್ರಾಽಕಾರಿ ಎಂ.ಬಿ.ಶರಣಪ್ಪ ಮಾತನಾಡಿ, ಹೊಳೆಬಾಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರ ನಡುವೆ ಇರುವ ಹೊಂದಾಣಿಕೆ ಮನೋಭಾವ ಸಂಘವನ್ನು ಬೆಳೆಸಿದೆ. ಇದೊಂದು ಮಾದರಿ ಸಂಘವಾಗಿದ್ದು ನಿರಂತರ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಾನ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಪಾಧ್ಯಕ್ಷ ಎಂ.ಎಸ್.ತಿಮ್ಮಪ್ಪ ರಾಮಗೊಂಡನಕೊಪ್ಪ, ನಿರ್ದೇಶಕರಾದ ಜಿ.ಎಂ.ತೋಟಪ್ಪ ಚೀಲನೂರು, ಬಿ.ಎಚ್.ಬಾಲಚಂದ್ರ, ಕೆ.ಲಿಂಗಪ್ಪ ಮುಟಗುಪ್ಪೆ, ಕೆ.ಪಿ.ಕೆರೆಸ್ವಾಮಿ ಕಡಸೂರು, ಕವಿತಾ ಕಡಸೂರು, ಜಿ.ವೈ.ನಾಡಿಗೇರ ಎನ್.ದೊಡ್ಡೇರಿ, ಡಿ.ಬಿ.ಮಂಜಪ್ಪ ಬನದಕೊಪ್ಪ, ಸಾವಿತ್ರಮ್ಮ ಮುಟಗುಪ್ಪೆ, ಮುಖ್ಯ ಕಾರ್ಯನಿರ್ವಾಹಕ ಪರಶುರಾಮಪ್ಪ, ಸಿಬ್ಬಂದಿ ಕೆ.ರಾಮಪ್ಪ, ನಂದನ್, ಕನ್ನಿ ಮಂಜಪ್ಪ, ಉದಯ್ ಕುಮಾರ್, ಬಿ.ವೆಂಕಟೇಶ್ ಮುಖಂಡರಾದ ಕೆ.ಅಜ್ಜಪ್ಪ, ಸಿ.ಜಿ.ಬಸಪ್ಪ, ಭೈರಪ್ಪ, ವಿಶ್ವೇಶ್ವರ ಹೆಗಡೆ ಇತರರಿದ್ದರು.