

ದ್ವಿಚಕ್ರ ವಾಹನದಲ್ಲಿ ಬಂದ ಖದೀಮರಿಬ್ಬರು ಬ್ಯಾಂಕಿನಿಂದ ಹಣ ಡ್ರಾ ಮಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯಿಂದ 1,34,000 ರೂ. ನಗದು ಇದ್ದ ಬ್ಯಾಗ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕುವೆಂಪುನಗರದ 1ನೇ ಹಂತದ ನಿವಾಸಿ ಕೆ.ಮದನ್ ಹಣ ಕಳೆದುಕೊಂಡವರು. ಕುವೆಂಪುನಗರ ನೃಪತುಂಗ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್(ಎಂ. ಬ್ಲಾಕ್ ಶಾಖೆ)ಗೆ ಬಂದು ತಮ್ಮ ಬಳಿಯಿದ್ದ ಚೆಕ್ ಮೂಲಕ 1,34,000 ರೂ. ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ.
ಬಳಿಕ ಬೆಳಗ್ಗೆ 11.50 ಗಂಟೆ ಸಮಯದಲ್ಲಿ ನೃಪತುಂಗ ರಸ್ತೆಯಲ್ಲಿರುವ ಶ್ರಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಖದೀಮರಿಬ್ಬರು ಹಿಂಭಾಗದಿಂದ ಇವರನ್ನು ಬಿಗಿಯಾಗಿ ಹಿಡಿದುಕೊಂಡು ಹಣವಿದ್ದ ಬ್ಯಾಗ್‌ಅನ್ನು ಕಿತ್ತುಕೊಂಡು ಕುವೆಂಪುನಗರದ ಕಾಂಪ್ಲೆಕ್ಸ್ ಕಡೆಗೆ ಹೋಗಿದ್ದಾರೆ. ಬ್ಯಾಗ್‌ನಲ್ಲಿ ಪಾಸ್‌ಬುಕ್, ಚೆಕ್ ಬುಕ್ ಹಾಗೂ ಆಧಾರ್ ಕಾರ್ಡ್ ಕೂಡ ಇರುತ್ತವೆ. ನನಗೆ ಗಾಬರಿಯಾಗಿದ್ದರಿಂದ ಬೈಕಿನ ನಂಬರ್ ಪ್ಲೇಟ್‌ಅನ್ನು ನೋಡಲು ಸಾಧ್ಯವಾಗಿರುವುದಿಲ್ಲ. ಬೈಕ್‌ನಲ್ಲಿ ಬಂದವರು ಹೆಲ್ಮೆಟ್ ಧರಿಸಿರಲಿಲ್ಲ. ಅವರನ್ನು ನೋಡಿದರೆ ಗುರುತಿಸುತ್ತೇನೆ ಎಂದು ಮದನ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಕುವೆಂಪುನಗರ ಠಾಣೆ ಪೊಲೀಸರು, ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.