ಬಂಡೀಪುರದ ಸಫಾರಿಗೆ 2 ಬಸ್

23-GPT-4
Published on
  • ಗುಂಡ್ಲುಪೇಟೆ: ವಾರಾಂತ್ಯದಲ್ಲಿ ಬಂಡೀಪುರದ ಸಫಾರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೊಸದಾಗಿ ಎರಡು ಬಸ್ಸುಗಳನ್ನು ಖರೀದಿಸಿ ತಂದಿದ್ದು ಸದ್ಯದಲ್ಲಿಯೇ ಸೇವೆಗೆ ಸಮರ್ಪಿಸಲಾಗುವುದು.
    ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶನಿವಾರ ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸದ್ಯ ಬಂಡೀಪುರದಲ್ಲಿ ಏಳು ಬಸ್, ಐದು ಜಿಪ್ಸಿ ಹಾಗೂ ಮೂರು ಕ್ಯಾಂಪರ್ ವಾಹನಗಳಿದ್ದರೂ ವಾರಾಂತ್ಯದಲ್ಲಿ ಬಂಡೀಪುರಕ್ಕೆ ಬರುವ ಪ್ರವಾಸಿಗರಿಗೆ ಸಾಲುತ್ತಿಲ್ಲ.
    ಪ್ರವಾಸಿಗರು ಹೆಚ್ಚಾದ ಸಂದರ್ಭದಲ್ಲಿ ಎಲ್ಲಾ ವಾಹನಗಳು ಭರ್ತಿಯಾದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾದ 50 ನೇ ವರ್ಷದ ಅಂಗವಾಗಿ ಆರಂಭಿಸಿದ ಬಂಡೀಪುರ ಯುವಮಿತ್ರ ಯೋಜನೆಯ ಎರಡು ಬಸ್ಸುಗಳನ್ನು ಸಹಾ ಬಳಕೆ ಮಾಡಲಾಗುತ್ತದೆ. ಆದರೂ ಕೆಲವೊಮ್ಮೆ ಸಫಾರಿ ಟಿಕೆಟ್ ಸಿಗದೆ ಪ್ರವಾಸಿಗರು ನಿರಾಶರಾಗಿ ವಾಪಸಾಗುತ್ತಿದ್ದಾರೆ.
    ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೊಸದಾಗಿ ಎರಡು ಬಸ್ ಖರೀದಿಸಿದೆ. ಇವು ಸೋಮವಾರ ಸಂಜೆ ಮೇಲುಕಾಮನಹಳ್ಳಿ ಸಫಾರಿ ಟಿಕೆಟ್ ಕೌಂಟರ್ ಬಳಿ ಆಗಮಿಸಿವೆ. ಈ ಹೊಸ ವಾಹನಗಳನ್ನು ಸಫಾರಿಗೆ ಹೋಗುವ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಮಾರ್ಪಾಡು ಮಾಡಬೇಕಾಗಿದೆ. ಸದ್ಯ ಶೋರೂಂನಿಂದ ಬಂದಿರುವ ಬಿಳಿ ಬಣ್ಣದ ಬಸ್ ಗಳನ್ನು ಅರಣ್ಯ ಪರಿಸರಕ್ಕೆ ಹೊಂದಿಕೊಳ್ಳುವಂತೆ ಹಸಿರು ಬಣ್ಣಕ್ಕೆ ಬದಲಾವಣೆ ಮಾಡಿದ ನಂತರ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕಾಗಿದೆ. ಆ ನಂತರ ಇವುಗಳನ್ನು ಬಳಕೆಗೆ ತರಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net