

ಗುಂಡ್ಲುಪೇಟೆ : ಹಾವುಗಳ ಬಗ್ಗೆ ಅನಗತ್ಯವಾಗಿ ಭಯಪಡುವುದು ಬೇಡ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ತೆರಕಣಾಂಬಿ ಗ್ರಾಮದ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ ಭಯಬಿಡಿ- ಗೌರವಿಸಿ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಹಾವುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಸುಮಾರು 278 ಜಾತಿಯ ಉರಗಗಳಿವೆ. ಅದರಲ್ಲಿ ಕೇವಲ 4 ಮಾತ್ರ ವಿಷಕಾರಿಯಾಗಿವೆ. ಹಾವು ಕಡಿತದಿಂದ ಸಾಯುವವರಿಗಿಂತ ಅದರ ಭಯದಲ್ಲೇ ಸಾಯುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದರು.
ಪ್ರತಿವರ್ಷ ನಾಗರಹಾವು, ಕೊಳಕು ಮಂಡಲ, ಕಟ್ಟುಹಾವುಗಳಿಂದ ಕಡಿತಕೊಳಗಾಗಿ ಸುಮಾರು 50ಸಾವಿರ ಜನರು ಸಾವಿಗೀಡಾಗುತ್ತಿದ್ದಾರೆ. ಆದರೆ ಇತ್ತೀಚೆಗಿನ ಸಂಶೋಧನೆಗಳು ಹಾವು ಕಡಿತಕ್ಕೆ ಒಂಟೆಯ ಕಣ್ಣೀರಿನಿಂದ ಔಷಧ ಕಂಡುಹಿಡಿದಿದ್ದಾರೆ. ಇದೇ ಮೊದಲಬಾರಿಗೆ ಧಾರವಾಡದ ವೈದ್ಯಕೀಯ ಸಂಸ್ಥೆಯವರು ಹಾವುಕಡಿತಕ್ಕೊಳಗಾದವರ ರಕ್ತ ಪರೀಕ್ಷಿಸಿ ವಿಷದ ಪ್ರಮಾಣದ ಮೇಲೆ ಚಿಕಿತ್ಸೆ ಕೊಡುತ್ತಿದ್ದಾರೆ.
ಇದು ಉತ್ತಮ ಫಲಿತಾಂಶ ನೀಡುತ್ತಿದೆ. ಆದ್ದರಿಂದ ಹಾವುಗಳ ಬಗ್ಗೆ ಅನಗತ್ಯ ಭಯ ಬೇಡ. ಹಾವಿನ ಬಗ್ಗೆಮೂಢನಂಬಿಕೆ ಬಿಟ್ಟು ರೈತ ಮಿತ್ರರಾದ ಹಾವುಗಳನ್ನು ರಕ್ಷಿಸಬೇಕು ಎಂದರು. ಹಲವು ವಿಷರಹಿತವಾದ ಹಾವುಗಳಿವೆ . ಆದರೂ ಭಯಪಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಕಂಡುಬರುವ ಕಾಳಿಂಗ ಸರ್ಪಕ್ಕೆ ಓಫಿಫೋಗಸ್ ಕಾಳಿಂಗ ಎಂದು ಹೆಸರಿದೆ. ಇದು ಕರ್ನಾಟಕದ ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಆಗುಂಬೆಯಲ್ಲೆ ಇದರ ಸಂಶೋಧನಾ ಕೇಂದ್ರವೂ ಇದೆ ಎಂದರು.
ಕಾರ್ಯಕ್ರಮದಲ್ಲಿ ತಾವೇ ಸೆರೆಹಿಡಿದಿದ್ದ ವಿವಿಧ ಜಾತಿಯ ಹಾವುಗಳ ಛಾಯಾಚಿತ್ರ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಮಹದೇವಪ್ರಸಾದ್, ಶಿಕ್ಷಕರಾದ ನಂಜುಂಡಸ್ವಾಮಿ, ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಇದ್ದರು.