ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

gpt ..... 5
Published on

  ವಿಜಯವಾಣಿ ಸುದ್ದಿಜಾಲ ಗುಂಡ್ಲುಪೇಟೆ

ಗ್ರಾಮಕ್ಕೆ ನಿರಂತರವಾಗಿ ದಾಳಿ ಮಾಡಿ ಬೆಳೆ ನಾಶಮಾಡುತ್ತಿರುವ ಆನೆಗಳನ್ನು ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ತಾಲೂಕಿನ ಹೊಸಪುರ ಗ್ರಾಮದ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಂಡೀಪುರದ ಓಂಕಾರ ವಲಯದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದರೂ ಈವರೆಗೆ ಯಾವುದೇ ಕ್ರಮಕೈಗೊಳ್ಳದ ಅರಣ್ಯಾಧಿಕಾರಿಗಳ ನಡೆಯಿಂದ ಬೇಸತ್ತ ಗ್ರಾಮಸ್ಥರು ಮುಖಂಡ ಮಹದೇವೇಗೌಡ ನೇತೃತ್ವದಲ್ಲಿ ಮೇಲು ಕಾಮನಹಳ್ಳಿಯಲ್ಲಿರುವ ಅರಣ್ಯ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸಮಸ್ಯೆಗಳನ್ನು

ಮನವರಿಕೆ ಮಾಡಲು ಮುಂದಾದರು.

ಆದರೆ ಕಚೇರಿಯಲ್ಲಿ ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕ ಎಸ್. ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ಇರಲಿಲ್ಲ. ದಿನಪೂರ್ತಿ ಕಾದು ಕುಳಿತಿದ್ದರೂ ಯಾವುದೇ ಅಧಿಕಾರಿಗಳು ಭೇಟಿಗೆ, ಸಮಸ್ಯೆ ಹೇಳಿಕೊಳ್ಳಲು ಲಭ್ಯವಾಗಲಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸಂಜೆ ವೇಳೆಗೆ ಕಚೇರಿಗೆ ಆಗಮಿಸಿದ ಎಸಿಎಫ್ ನವೀನ್ ಕುಮಾರ್ ಅವರು, ಹೊಸಪುರ ಗ್ರಾಮದ ರೈತರಿಂದ ಅಹವಾಲು ಸ್ವೀಕರಿಸಿದರು. ಆನೆ ದಾಳಿ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net