ಮಲ್ಲಯ್ಯನಪುರ ಗ್ರಾಮದೇವತೆ ಹಬ್ಬಕ್ಕೆ ದೊರಕದ ಸಮ್ಮತಿ

10-MAR-GPT-1
Published on

ಒಮ್ಮತ ಮೂಡಿಸುವಲ್ಲಿ ವಿಫಲವಾದ ಸಭೆ

ಗುಂಡ್ಲುಪೇಟೆ : ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಗ್ರಾಮದೇವತೆ ಮಾರಮ್ಮನ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಸೋಮವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆ ಒಮ್ಮತ ಮೂಡಿಸುವಲ್ಲಿ ವಿಫಲವಾಯಿತು. ಹಾಗಾಗಿ ಹಬ್ಬ ನಡೆಸಲು ಪೊಲೀಸ್ ಇಲಾಖೆ ಸಮ್ಮತಿ ನಿರಾಕರಿಸಿತು. ಗ್ರಾಮದ ಖಾಸಗಿ ಜಮೀನಿನಲ್ಲಿ ಮಂಗಳವಾರ ಮತ್ತು ಬುಧವಾರ ನಡೆಸಲು ಉದ್ದೇಶಿಸಿರುವ ದೇವಿಯ ಹಬ್ಬಕ್ಕೆ ತಮ್ಮನ್ನು ಹೊರಗಿಡಲಾಗಿದೆ ಎಂದು ಒಂದು ಸಮುದಾಯದವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಗ್ರಾಮದೇವತೆ ಮಾರಮ್ಮ ಹಬ್ಬ ಆಚರಣೆ ನಡೆಸುವ ಸಲುವಾಗಿ ತಹಸೀಲ್ದಾರ್ ಟಿ.ರಮೇಶ್ ಬಾಬು ಅಧ್ಯಕ್ಷತೆಯಲ್ಲಿ ಪೊಲೀಸ್ ಠಾಣೆ ವತಿಯಿಂದ ಸಭೆ ಆಯೋಜಿಸಲಾಗಿತ್ತು.

ವಿವಿಧ ಸಮುದಾಯದವರೂ ಒಪ್ಪಿಗೆ ನೀಡಿದರೆ ಮಾತ್ರ ಶಾಂತಿಯುತವಾಗಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡುವುದಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಸಬ್‌ಇನ್ಸ್‌ಪೆಕ್ಟರ್ ಸಾಹೇಬ ಗೌಡ ಅವರು ಮುಖಂಡರಿಗೆ ಸ್ಪಷ್ಟವಾಗಿ ತಿಳಿಸಿದರು. ಇದಕ್ಕೆ ಕೆಲವರು ಒಪ್ಪದ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಯನ್ನೇ ಕೈಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net