ಸಭೆಗೆ ಬಾರದ ಅಧಿಕಾರಿಗಳ ವಿಚಾರಣೆ

08-JAN-GPT-1
Published on

 ತಹಸೀಲ್ದಾರ್ ಟಿ.ರಮೇಶ್‌ಬಾಬು ಭರವಸೆ

ಗುಂಡ್ಲುಪೇಟೆ : ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ತಹಸೀಲ್ದಾರ್ ಟಿ.ರಮೇಶ್‌ಬಾಬು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಹಿತರಕ್ಷಣಾ ಸಭೆಗೆ ಹಲವು ಅಧಿಕಾರಿಗಳು ಗೈರುಹಾಜರಾಗಿದ್ದು ಆಕ್ಷೇಪಕ್ಕೆ ಕಾರಣವಾಯಿತು.

ಕಳೆದ ಶನಿವಾರ ಅಧಿಕಾರಿಗಳ ಗೈರಿನಿಂದ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಇಂದೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಾಗದ ಹಿನ್ನೆಲೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಗೈರಾದವರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಕಳೆದ ಬಾರಿ ನಡೆದ ಸಭೆಯಲ್ಲಿ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ತಾಲೂಕು ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಉದ್ದೇಶಿತ ಸಭೆ ಬಗ್ಗೆ ಅಧಿಕಾರಿಗಳಿಗೆ ತುಂಬಾ ತಾತ್ಸಾರ ಮನೋಭಾವವಿದೆ. ಶಿಕ್ಷಣ ಇಲಾಖೆ, ಆರೋಗ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕೇವಲ ಗುಮಾಸ್ತರನ್ನು ಕಳಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮೇಲು ಕಾಮನಹಳ್ಳಿ ಮತ್ತು ಯಡವನಹಳ್ಳಿಯ ಮೊರಾರ್ಜಿ ವಸತಿಶಾಲೆಗಳಲ್ಲಿ ಹಲವು ಸಮಸ್ಯೆಗಳು ಉಂಟಾಗಿದ್ದರೂ ಅಧಿಕಾರಿಗಳು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತಿಲ್ಲ. ಪ್ರಮುಖ ವಿಚಾರಗಳ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಅಧಿಕಾರಿಗಳು ಇಲಾಖೆಗೆ ಸಂಬಂಧಪಟ್ಟ ವಿಚಾರಗಳಿಗೆ ಸಂಬಧಿಸಿದಂತೆ ಬೇರೆಡೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ವಿಚಾರಿಸಿ ಗೈರು ಹಾಜರಾದವರ ವಿರುದ್ಧ ಕ್ರಮಕೈಗೊಳ್ಳುವೆ ಎಂದು ತಹಸೀಲ್ದಾರ್ ಭರವಸೆ ನೀಡಿದರು.

ಬ್ಯಾಂಕುಗಳೂ ಸಾಲ ನೀಡುತ್ತಿಲ್ಲ : ಪುರಸಭೆಯ ವಾಣಿಜ್ಯ ಮಳಿಗೆಯನ್ನು ಹರಾಜಿನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಬಾಡಿಗೆಗೆ ಪಡೆದುಕೊಂಡು 6 ತಿಂಗಳಾದರೂ ಇನ್ನೂ ಪುರಸಭೆ ಬಿಡ್‌ದಾರರಿಗೆ ಕೊಟ್ಟಿಲ್ಲ. ಇದರಿಂದ ಸಾಲ-ಸೋಲ ಮಾಡಿ ಪುರಸಭೆಗೆ ಹಣಕಟ್ಟಿರುವ ಬಾಡಿಗೆದಾರರ ಗತಿಏನು ? ಸರ್ಕಾರ ಪರಿಶಿಷ್ಟರಿಗೆ ಸಾಲಸೌಲಭ್ಯಗಳನ್ನು ಒದಗಿಸುತ್ತಿದ್ದರೂ ಫಲಾನುಭವಿಗಳಿಗೆ ಯಾವ ಬ್ಯಾಂಕುಗಳೂ ಸಾಲ ನೀಡುತ್ತಿಲ್ಲ. ಆದ್ದರಿಂದ ಲೀಡ್ ಬ್ಯಾಂಕ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಫಲಾನುಭವಿಗಳಿಗೆ ಸಾಲ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾಪಂ ಇಒ ಷಣ್ಮುಖ, ಸರ್ಕಲ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ, ತೆರಕಣಾಂಬಿ ಠಾಣೆಯ ಪಿಎಸ್‌ಐ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಹಾಗೂ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net