

ವಿಜಯವಾಣಿ ಸುದ್ದಿಜಾಲ ಗುಂಡ್ಲುಪೇಟೆ
ತಾಲೂಕಿನ ಹೊಸಪುರ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಬೆಳೆಗಳು ನಾಶವಾಗಿದೆ. ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಗ್ರಾಮದ ಶಿವರುದ್ರಪ್ಪ ಎಂಬುವರ ಜಮೀನಿಗೆ ಶನಿವಾರ ರಾತ್ರಿ ದಾಳಿ ನಡೆಸಿದ ಆನೆಗಳ ಹಿಂಡು ಜಮೀನಿನ ಸುತ್ತಲೂ ಹಾಕಿದ್ದ ಸೋಲಾರ್ ಬೇಲಿಯನ್ನು ಕಿತ್ತೆಸೆದಿವೆ.
ನಂತರ ಜಮೀನಿನ ಒಳಗೆ ಪ್ರವೇಶಿಸಿ ಅಲ್ಲಿ ಬೆಳೆದಿದ್ದ ಟೊಮ್ಯಾಟೋ ಹಾಗೂ ಹತ್ತಿ ಬೆಳೆಗಳನ್ನು ನಾಶಪಡಿಸಿವೆ. ಕಟಾವಿಗೆ ಬಂದಿದ್ದ ಸುಮಾರು 5 ಸಾವಿರ ಸಸಿಗಳನ್ನು ತುಳಿದು ಹಾಕಿದ್ದರಿಂದ ಲಕ್ಷಾಂತರ ರೂಪಾಯಿಯ ಬೆಳೆ ನಷ್ಟವಾಗಿದೆ. ಸೋಲಾರ್ ಬೇಲಿ ಸಂಪೂರ್ಣ ಹಾಳಾಗಿರುವುದರಿಂದ ಇನ್ನುಳಿದ ಯಾವ ಬೆಳೆಗಳನ್ನೂ ಉಳಿಸಿಕೊಳ್ಳಲು ಸಾಧ್ಯವಿಲ್ಲ
ದಂತಾಗಿದೆ ಎಂದು ಜಮೀನು ಮಾಲೀಕರು ಹತಾಶೆ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ಕಾಡಾನೆ ದಾಳಿಯಿಂದ ಹೀಗೆ ನಷ್ಟವಾದರೆ ಜೀವನ ಮಾಡುವುದು, ಮಾಡಿದ ಸಾಲ ತೀರಿಸುವುದು ಹೇಗೆ ? ಇದೇ ಪರಿಸ್ಥಿತಿ ಮುಂದುವರಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಿ ಆನೆಗಳು ಅರಣ್ಯದಿಂದ ಹೊತ, ತೋಟಗಳಿಗೆ ನುಗ್ಗದಂತೆ ಕ್ರಮ ವಹಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.