

ಗುಂಡ್ಲುಪೇಟೆ : ಆಹಾರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಹೊಸೂರು ಬಡಾವಣೆಯ ನಿರ್ಜನ ಪ್ರದೇಶದ ಮನೆಯೊಂದರಲ್ಲಿ ಭಾರಿ ಪ್ರಮಾಣದಲ್ಲಿ ಅಕ್ಕಿಯನ್ನು ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ನಿರೀಕ್ಷಕಿ ಪೂರ್ಣಿಮಾ, ಪಟ್ಟಣದ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ ನೇತೃತ್ವದಲ್ಲಿ ಪೊಲೀಸರು ಗುರುವಾರ ಸಂಜೆ ದಾಳಿ ನಡೆಸಿದರು.
7 ಟನ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಮನೆ ಮನೆಗಳಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸುತ್ತಿದ್ದ ಪಟ್ಟಣದ ನಿವಾಸಿ ರಾಮು ಎಂಬಾತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಏಜಸ್ ಎಂಬಾತ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಲಾಗಿದೆ ಎಂದು ಪಟ್ಟಣದ ಪೊಲೀಸರು ತಿಳಿಸಿದ್ದಾರೆ.