

ಗುಂಡ್ಲುಪೇಟೆ : ಮಕ್ಕಳ ಕಳ್ಳಸಾಗಾಣಿಕೆ ಜಾಲ ಇತ್ತೀಚೆಗೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಕಾನೂನು ಆರಿವು ಮೂಡಿಕೊಂಡು ಜಾಗೃತರಾಗಿರಬೇಕು ಎಂದು ಜೆಎಂಎಫ್‌ಸಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಂ.ಟಿ.ದೀಪು ಹೇಳಿದರು. ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ -ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ, ಹಣ ನೀಡುವ ಆಮಿಷವೊಡ್ಡಿ ಅಮಾಯಕ ಹೆಣ್ಣುಮಕ್ಕಳನ್ನು ಅಪಹರಿಸುವ, ಅಂಗಾಗ ಕತ್ತರಿಸಿಕೊಂಡು ಭಿಕ್ಷಾಟನೆಗೆ ಬಳಸಿಕೊಳ್ಳುವ ಪ್ರಕರಣ ಹೆಚ್ಚಾಗಿದೆ.
ಇದನ್ನು ತಡೆಗಟ್ಟಲು ಹಲವು ಕಾನೂನುಗಳಿವೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕಾನೂನುಗಳ ಅರಿವು ಪಡೆದುಕೊಳ್ಳಬೇಕು ಎಂದವರು ಸಲಹೆ ನೀಡಿದರು.
ಇತ್ತೀಚೆಗೆ ವಿವಿಧ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ದೇಶದ ಸಂಪತ್ತಾಗಬೇಕು. ತಾಲೂಕು ಕಾನೂನು ಸೇವಾ ಸಮಿತಿಯು ಉಚಿತ ಕಾನೂನು ಅರಿವು ಹಾಗೂ ನೆರವು ನೀಡುತ್ತಿದೆ. ವಕೀಲರನ್ನು ನಿಯೋಜಿಸಲು ಸಾಧ್ಯವಾಗದ ಬಡ ಜನರು ಇದರ ಸದುಪಯೋಗವನ್ನೂ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಜೆ.ಎಂ.ಎಫ್.ಸಿ ಮತ್ತು ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಆರ್.ಬಿ.ಗಿರೀಶ್, ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ, ಕಾಲೇಜಿನ ಪ್ರಾಂಶುಪಾಲ ಬಿ.ಜಿ.ಗೋಪಾಲಕೃಷ್ಣ ಇತರರು ಇದ್ದರು.