ತಿ.ನರಸೀಪುರ ಗ್ರಾಮಗಳಿಗೆ ಜಿಪಂ ಸಿಇಒ ಭೇಟಿ; ಕಾವೇರಿ ನದಿ ಪಾತ್ರದ ಜನರು ಎಚ್ಚರದಿಂದ ಇರಲು ಸಲಹೆ

mysore
Published on

ಮೈಸೂರು: ತಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಂಡಗನಕೊಪ್ಪಲು, ಕಲಿಯೂರು ಗ್ರಾಪಂ ವ್ಯಾಪ್ತಿಯ ತಡಿಮಾಲಂಗಿ ಹಾಗೂ ಹೆಮ್ಮಿಗೆ ಗ್ರಾಮಗಳಲ್ಲಿನ ಕಾವೇರಿ ನದಿ ಪಾತ್ರ ಸ್ಥಳಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ ಗಾಯತ್ರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.


ಕಾವೇರಿ ನದಿ ಪಾತ್ರದಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಪ್ರವಾಹ ಸಂದರ್ಭದಲ್ಲಿ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದರು. ಸ್ಥಳೀಯ ಪರಿಸ್ಥಿತಿಯನ್ನು ಆಧರಿಸಿ ಸ್ಥಳಾಂತರ ಮಾಡಲು ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.


ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಬಗ್ಗೆ ಮನೆ-ಮನೆಗಳಿಗೆ ನಳ ಸಂಪರ್ಕ ನೀಡಿರುವ ಬಗ್ಗೆ ಸ್ಥಳ ಪರಿಶೀಲಿಸಿದರು. ಕಲಿಯೂರು ಗ್ರಾ.ಪಂ ಗ್ರಂಥಾಲಯಕ್ಕೆ ಭೇಟಿ ನೀಡಿದರು.


ಇದೇ ಸಂದರ್ಭದಲ್ಲಿ ಕಲಿಯೂರು ಗ್ರಾಪಂ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ, ತೆರಿಗೆ ಸಂಗ್ರಹಣೆ, ಆಸ್ತಿಗಳ ಸರ್ವೇ, ಬೂದು ನೀರು ನಿರ್ವಹಣೆ, ನರೇಗಾ ಯೋಜನೆ, ಜೆಜೆಎಂ ಯೋಜನೆ ಅನುಷ್ಠಾನ ಕುರಿತು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳ ಜತೆ ಸಭೆ ನಡೆಸಿದರು.
ನಂತರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಿಸಿಯೂಟ ವಿತರಣೆ ಬಗ್ಗೆ ಶಾಲಾ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದರು.


ಕಲಿಯೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವ ಚಿಕ್ಕ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿ ನರೇಗಾ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕಾರ್ಮಿಕರಿಗೆ ಈ ಯೋಜನೆಯಡಿ ಆರೋಗ್ಯ ತಪಾಸಣೆ ಹಾಗೂ ವಿಮಾ ಸೌಲಭ್ಯ ಪಡೆಯುವ ಬಗ್ಗೆ ತಿಳಿವಳಿಕೆ ನೀಡಿದರು.


ನಂತರ ಹೆಮ್ಮಿಗೆ ಗ್ರಾಪಂಗೆ ಭೇಟಿ ನೀಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಯಲ್ಲಿ ಭಾಗವಹಿಸಿದರು. ಕುಡಿಯುವ ನೀರಿನ ಘಟಕಗಳ ಸುತ್ತಲು ಸ್ವಚ್ಛತೆ ಕಾಪಾಡಬೇಕು, ಎಲ್ಲೂ ನೀರು ನಿಲ್ಲದಂತೆ ಎಚ್ಚರವಹಿಸಬೇಕು, ಕಾಲ ಕಾಲಕ್ಕೆ ತಪ್ಪದೆ ಕುಡಿಯುವ ನೀರಿನ ಪರೀಕ್ಷೆಯನ್ನು ಮಾಡಬೇಕು ಎಂದು ಸೂಚಿಸಿದರು.


ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಮೇಘಲಾ, ಇಒ ಸಿ.ಕೃಷ್ಣ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರಂಜಿತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೈಲಾಶ್ ಮೂರ್ತಿ, ಸಹಾಯಕ ನಿರ್ದೇಶಕರು (ಗ್ರಾಉ) ಶಶಿಕುಮಾರ್, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ರಂಗಸ್ವಾಮಿ, ಪಿಡಿಒಗಳಾದ ಗಾಯಿತ್ರಿ, ಶೈಲಜಾ ಹಾಗೂ ಚಿದಾನಂದ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net