

ಕುಕನೂರು: ಜೆಜೆಎಂ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬುಧವಾರ ಮಾತನಾಡಿದರು.
ಇದನ್ನೂ ಓದಿ: ಜೆಜೆಎಂ ಯೋಜನೆ ಪೂರ್ಣಗೊಳಿಸಲು ಡೆಡ್ಲೈನ್
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 37 ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಜೆಜೆಎಂ ಕಾಮಗಾರಿಯನ್ನು ನಿಗಧಿತ ಅವಧಿಯ ಒಳಗಡೆ ಪೂರ್ಣಗೊಳಿಸಬೇಕು. ಎಲ್ಲ ಜೆಜೆಎಂ ಗುತ್ತಿಗೆದಾರರು ವಿಳಂಬ ಮಾಡದೇ 150 ಗ್ರಾಮಗಳಿಗೆ ಶುದ್ಧ ಕುಡಿವ ನೀರು ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದರು.
ಈಗಾಗಲೇ ಎರಡು ಗ್ರಾಪಂಗಳ ಜೆಜೆಎಂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಾಮಗಾರಿ ನಿಗಧಿತ ಕಾಲವಧಿಯಲ್ಲಿ ಪೂರ್ಣಗೊಳಿಸದಿದ್ದರೆ ಐಪಿಸಿ ಸೆಕ್ಷನ್ 268ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಚ್ಚರಿಸಿದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ರಿಜ್ವಾನ್ ಬೇಗಂ, ತಾಪಂ ಸಂತೋಷ ಪಾಟೀಲ್ ಸೇರಿದಂತೆ ಪಿಡಿಒಗಳು ಭಾಗವಹಿಸಿದ್ದರು.