ಮಾ.4ರಂದು ಡಿಸಿ ಕಚೇರಿ ಬಳಿ ಗ್ರಾಪಂ ಸದಸ್ಯರ ಪ್ರತಿಭಟನೆ...

Panchayath
Published on

ಉದಯಕುಮಾರ್​ ಶೆಟ್ಟಿ ಮಾಹಿತಿ

ಅಧಿಕಾರ ಉಳಿವಿಗಾಗಿ ಹೋರಾಟ

ವಿಜಯವಾಣಿ ಸುದ್ದಿಜಾಲ ಉಡುಪಿ

ಗ್ರಾಮ ಪಂಚಾಯಿತಿಗಳ ಅಧಿಕಾರದ ಉಳಿವಿಗಾಗಿ ಕುಂದಾಪುರ ತಾಲೂಕು ಪಂಚಾಯತ್​ ರಾಜ್​ ಒಕ್ಕೂಟ ಹಾಗೂ ಗ್ರಾಪಂ ಹಕ್ಕೊತ್ತಾಯ ಆಂದೋಲನದ ವತಿಯಿಂದ ಜಂಟಿಯಾಗಿ ಮಾ.4ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಉದಯಕುಮಾರ್​ ಶೆಟ್ಟಿ ಮಾಹಿತಿ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಗ್ರಾಮ ಸ್ವರಾಜ್​ ಹಾಗೂ ಪಂಚಾಯತ್​ ರಾಜ್​ ಕಾಯಿದೆ ಅನ್ವಯ ಗ್ರಾಪಂ ಎನ್ನುವುದು ಸ್ಥಳೀಯ ಸ್ವಯಂ ಸರ್ಕಾರವಾಗಿದೆ. ಆದರೆ, ಪ್ರಸ್ತುತ ವಿವಿಧ ಹಂತದಲ್ಲಿ ಅಧಿಕಾರಶಾಹಿ ಆಡಳಿತ ವ್ಯವಸ್ಥೆಯಿಂದಾಗಿ ಗ್ರಾಪಂಗಳು ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಹೋರಾಟ ಅನಿವಾರ್ಯ

ಗ್ರಾಪಂಗಳಲ್ಲಿ 2017ರಿಂದ ಹೊಸ ಹುದ್ದೆಗೆ ಅಥವಾ ತೆರವಾದ ಸ್ಥಾನಕ್ಕೆ ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ಗ್ರಾಪಂ ಆಡಳಿತಕ್ಕೆ ತೊಂದರೆಯಾಗುತ್ತಿದೆ. 25 ಸೆಂಟ್ಸ್​ ವಿಸ್ತೀರ್ಣದವರೆಗಿನ ಜಮೀನಿಗೆ ಏಕ ನಿವೇಶನ (ಸಿಂಗಲ್​ ಲೇ ಔಟ್​) ನಕ್ಷೆ/ವಿನ್ಯಾಸಗಳಿಗೆ ಮೊದಲಿನಂತೆ ಅನುಮೋದನೆ ನೀಡುವ ಅಧಿಕಾರ ಗ್ರಾಪಂಗೆ ನೀಡಬೇಕು. ಅಧ್ಯಕ್ಷರು ಹಾಗೂ ಆರೋಗ್ಯ ಸಹಾಯಕ/ವೈದ್ಯಾಧಿಕಾರಿ ಸಹಿ, ಹಣಕಾಸು ನಿರ್ವಹಣೆಗೆ ಕಡ್ಡಾಯ ಆದೇಶ ನೀಡಬೇಕು. ಗ್ರಾಪಂಗಳು ಸರ್ಕಾರದ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸದೆ ಸಂವಿಧಾನದ ಆಶಯ ಹಾಗೂ ಕಾಯಿದೆಯಂತೆ ಸ್ಥಳೀಯ ಸ್ವಯಂ ಸರ್ಕಾರವಾಗಿ ಉಳಿಯುವಂತಾಗಲು ಒಕ್ಕೊರಲ ಧ್ವನಿ, ಹೋರಾಟ ಅನಿವಾರ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್​.ಜನಾರ್ದನ್​ ಮರವಂತೆ, ಬೈಂದೂರು ವಲಯ ಅಧ್ಯಕ್ಷ ಪ್ರದೀಪ್​ ಕೊಟ್ಟಾರಿ ಹಳ್ಳಿಹೊಳೆ, ಕುಂದಾಪುರ ವಲಯ ಅಧ್ಯಕ್ಷ ರಮೇಶ್​ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ್​ ಗಾಣಿಗ ಇದ್ದರು.

ನರೇಗಾ ಯೋಜನೆಯಡಿ ವಾರ್ಷಿಕ 10 ಸಾವಿರ ಮಾನವ ದಿನ ಸೃಜಿಸಿದರೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಳ್ಳಬಹುದಾಗಿದೆ. ಆದರೆ, 10 ಸಾವಿರಕ್ಕಿಂತ ಜಾಸ್ತಿ ಸೃಜಿಸಿ, ಕಾಮಗಾರಿ ನಡೆಸಿದರೂ ಅನೇಕ ಗ್ರಾಪಂಗಳಿಗೆ ಪ್ರತ್ಯೇಕವಾಗಿ ನರೇಗಾ ಸಿಬ್ಬಂದಿ ನೀಡಿಲ್ಲ. ಕೂಡಲೇ ಪ್ರತ್ಯೇಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಆಗಬೇಕು. | ಎಸ್​.ಜನಾರ್ದನ್​ ಮರವಂತೆ. ಒಕ್ಕೂಟದ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net