ಪಿಡಿಒಗಳ ವಿರುದ್ಧ ತಿರುಗಿಬಿದ್ದ ಗ್ರಾಮ ಪಂಚಾಯಿತಿ ಸದಸ್ಯರು: ತಾಪಂ ಕಚೇರಿ ಎದುರು ಪ್ರತಿಭಟನೆ

13M.D.R.4
Published on

ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮದ್ದೂರು ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಒಕ್ಕೂಟದ ಅಧ್ಯಕ್ಷ ಜಿ.ಎನ್. ಸತ್ಯ ಮಾತನಾಡಿ, ಪ್ರತಿನಿತ್ಯ ಗ್ರಾಪಂ ಅಧಿಕಾರಿಗಳು ಮತ್ತು ಸದಸ್ಯರ ನಡುವೆ ತಿಕ್ಕಾಟಗಳಾಗುತ್ತಿವೆ. ನಾವು ಆಯ್ಕೆಯಾಗಿ 2 ವರ್ಷ ಕಳೆದರೂ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ.ಹೀಗಾಗಿ ವಾರ್ಡ್ ಗ್ರಾಮ ಸಭೆಗಳನ್ನು ಪದೇ ಪದೆ ಕರೆಯುವಂತೆ ಗ್ರಾಪಂಗಳಿಗೆ ನೀಡಿರುವ ನಿರ್ದೇಶನ ಹಿಂಪಡೆಯಬೇಕು. ಗ್ರಾಪಂ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರ ಸಭೆಗಳನ್ನು ಕನಿಷ್ಠ ಎರಡು ತಿಂಗಳಿಗೊಮ್ಮೆ ತಾಪಂ ಹಂತದಲ್ಲಿ ಕರೆಯಲು ಕ್ರಮವಹಿಸಬೇಕು. ಕೆಡಿಪಿ ಮತ್ತು ಗ್ರಾಮ ಸಭೆಗಳಲ್ಲಿ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಗೈರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪಿಡಿಒ ಮತ್ತು ಗ್ರಾಪಂ ಸಿಬ್ಬಂದಿಯನ್ನು ತಾಪಂ ಮತ್ತು ಜಿಪಂ ಮಟ್ಟದ ಸಭೆಗಳಿಗೆ ಪದೇ ಪದೆ ಕರೆಯುವುದನ್ನು ನಿಲ್ಲಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಸಂಗ್ರಹಣೆ, ಪ್ರಗತಿ ಪರಿಶೀಲನೆ ಮತ್ತು ನಿರ್ದೇಶನ ಕೊಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಗಳಿಗೆ ಸಕಾಲದಲ್ಲಿ ಅನುಮೋದನೆ ನೀಡಬೇಕು. ದೀರ್ಘಾವಧಿಯಿಂದ ಬಾಕಿ ಉಳಿದಿರುವ ವೈಯಕ್ತಿಕ ಫಲಾನುಭವಿಗಳು ಮತ್ತು ಸಮುದಾಯ ಕಾಮಗಾರಿಗಳ ಸಾಮಗ್ರಿ ವೆಚ್ಚದ ಹಣವನ್ನು ತಕ್ಷಣ ಪಾವತಿಸಲು ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದ ಹೆಸರಿನಲ್ಲಿ ಸರ್ಕಾರದ ಹಣ ಲೂಟಿಯಾಗುತ್ತಿದ್ದು, ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ರಾಧಾಕೃಷ್ಣ, ದಯಾನಂದ, ಮಂಜು, ರವಿಕುಮಾರ್, ಮಹೇಶ, ಸೌಮ್ಯ, ಸತೀಶ್, ನಳಿನಿ, ಸೌಮ್ಯಾ, ಪ್ರಕಾಶ್, ಕುಮಾರ್‌ಕೊಪ್ಪ, ಬೋರೇಗೌಡ, ಗೂಳೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net