

ಕಾರವಾರ: ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗ್ರಾಪಂ ಸದಸ್ಯನನ್ನು ಚಿತ್ತಾಕುಲಾ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಚಿತ್ತಾಕುಲಾ ತಾರಿವಾಡ ಗ್ರಾಪಂ ಸದಸ್ಯ ದಿಲೀಪ ಗಜಿನಕರ್ ಅವರನ್ನು ಬಂಧಿಸಿದ್ದು, ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ.
ಮಂಗಳವಾರ ಗಣಪತಿ ವಿಸರ್ಜನೆಯ ವೇಳೆ ದಿಲೀಪ ಪಿಎಸ್‌ಐ ನಡುವೆ ಮಾತಿಗೆ ಮಾತು ಬೆಳೆದಿತ್ತು ಎನ್ನಲಾಗಿದೆ.
ಆದರೆ, ಘಟನೆ ಸಂಬಂಧ ಚಿತ್ತಾಕುಲಾ ಗ್ರಾಪಂ ಸದಸ್ಯರು, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಗಣಪತಿ ಮೆರವಣಿಗೆಯ ಸಂದರ್ಭದಲ್ಲಿ ದೊಡ್ಡ ಗಲಾಟೆ ಆಗಿರಲಿಲ್ಲ. ಆದರೆ, ತಡ ರಾತ್ರಿ ಮನೆಗೆ ನುಗ್ಗಿ ಗಜಿನಕರ್ ಅವರನ್ನು ಪೊಲೀಸರು ಬಂಧಿಸಲಾಗಿದೆ. ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅವರ ಮೇಲೆ ಸಾಕಷ್ಟು ಹಲ್ಲೆ ಮಾಡಲಾಗಿದೆ ಎಂದು ದೂರಿದ್ದಾರೆ.ಈ ಸಂಬಂಧ ನ್ಯಾಯಾಲಯದಲ್ಲಿಯೂ ಗಜಿನಕರ್ ಪರವಾಗಿ ಖಾಸಗಿ ದೂರು ನೀಡಿದ್ದಾಗಿ ತಿಳಿದುಬಂದಿದೆ. ಚಿತ್ತಾಕುಲಾ ಬೂದಿ ಮುಚ್ಚಿದ ಕೆಂಡದಂತಾಗಿದೆ.