

ಶ್ರೀರಂಗಪಟ್ಟಣ: ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸೂಕ್ತವಾಗಿ ತಲುಪಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರ ಅಗತ್ಯ ಎಂದು ಬಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷ ನೆಲಮನೆ ಯೋಗೇಶ್ ತಿಳಿಸಿದರು.
ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ 2021-22ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ವರ್ಷದಲ್ಲಿ ವಿವಿಧ ಮೂಲಗಳಿಂದ 1,84,68,244 ರೂ. ಜಮೆಯಾಗಿದೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲಸೌಕರ್ಯಗಳಾದ ನೀರು, ಬೀದಿದೀಪ , ಅಂಗನವಾಡಿ, ಉದ್ಯಾನ, ಕಾಂಕ್ರಿಟ್ ರಸ್ತೆ, ಚರಂಡಿ, ಸರ್ಕಾರಿ ಶಾಲೆಗಳ ಕಾಂಪೌಂಡ್, ಗ್ರಂಥಾಲಯದ ಡಿಜಿಟಲೀಕರಣಕ್ಕೆ ಬೇಕಾದ ಪೂರಕ ವ್ಯವಸ್ಥೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ 1,61,55,569 ರೂ. ವೆಚ್ಚ ಮಾಡಲಾಗಿದೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಗುರಿ ಹೊಂದಲಾಗಿದೆ ಎಂದರು.
ಜಿಪಂ ಹಿರಿಯ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಬೆಟ್ಟಮ್ಮ, ಸದಸ್ಯರಾದ ಜಗದೀಶ್, ಪ್ರೀತಿ ,ರಶ್ಮಿ ರವಿಕುಮಾರ್, ಸಾವಿತ್ರಮ್ಮ, ಸವಿತಾ, ಪಿಡಿಒ ರವಿ, ಕಾರ್ಯದರ್ಶಿ ಮಹದೇವು ಇತರರು ಇದ್ದರು.