

ಕಾರವಾರ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ (GP Employees strike) ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ನ.27 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಠಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು,ವೃಂದ ಮತ್ತು ನೇಮಕಾತಿ ನಿಯಮವನ್ನು ರೂಪಿಸಿ, ಸರ್ಕಾರಿ ನೌಕರರ ಸರಿ ಸಮಾನ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸಿ ತಮ್ಮ ಕರ್ತವ್ಯವನ್ನು ಬಹಿಷ್ಕರಿಸಿ ಪ್ರತಿಭಟಿಸಲಿದ್ದು, ಗ್ರಾಪಂ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದರು. ಕೆಲ ದಿನಗಳ ಹಿಂದೆ ಗ್ರಾಪಂಗೆ ಸಂಬಂಧಿಸಿದ ವಿವಿಧ ಸಂಘಟನೆಗಳ ಜತೆ ಸೇರಿ ಬೆಂಗಳೂರು ಹಾಗೂ ಕಾರವಾರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಚಿವರು ಕ್ರಮ ವಹಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಆದರೆ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರು ದಿನಗಳ ವೇತನವನ್ನು ಕಡಿತ ಮಾಡಿದ್ದನ್ನು ಬಿಟ್ಟರೆ ಇದುವರೆಗೂ ಯಾವುದೇ ಸಕಾರಾತ್ಮಕ ಕ್ರಮ ವಹಿಸಿಲ್ಲ. ಇದರಿಂದ ಮತ್ತೆ ಪ್ರತಿಭಟನೆಗೆ ಇಳಿಯಲಿದ್ದೇವೆ ಎಂದರು.
ಸರ್ಕಾರದ ಸೇವೆಗಳನ್ನು ಜನರಿಗೆ ನೇರಾಗಿ ತಲುಪಿಸುವವರು ಗ್ರಾಮ ಪಂಚಾಯಿತಿ ನೌಕರರು (GP Employees strike ).ಜನರ ಸಮಸ್ಯೆಗಳನ್ನು ಬಗೆಹರಿಸುವವರು ಪಂಚಾಯಿತಿ ನೌಕರರು. ಆದರೆ, ನಮ್ಮ ಬೇಡಿಕೆಗಳಿಗೆ ಬಲೆಯೇ ಇಲ್ಲದಂತಾಗಿದೆ. ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ವಾಟರ್ ಆಪರೇಟರ್, ಅಟೆಂಡರ್, ಕ್ಲೀನರ್ ಹೀಗೆ ವಿವಿಧ 6 ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 1500 ಕ್ಕೂ ಅಽಕ ನೌಕರರು ಜಿಲ್ಲೆಯಲ್ಲಿದ್ದೇವೆ. ನಮ್ಮನ್ನು ಗ್ರಾಮ ಪಂಚಾಯಿತಿ ನೌಕರರು ಎಂದು ಪರಿಗಣಿಸಿ, ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಿದ 13 ರಿಂದ 18 ಸಾವಿರ ರೂ.ವರೆಗಿನ ಕನಿಷ್ಠ ವೇತನ ನೀಡಲಾಗುತ್ತಿದೆ. ಕಾರ್ಯಕ್ಕೆ ಅನುಗುಣವಾಗಿ ನಮ್ಮನ್ನು ಸಿ ಮತ್ತು ಡಿ ದರ್ಜೆಯ ನೌಕರರು ಎಂದು ಪರಿಗಣಿಸಿ, ಸರ್ಕಾರಿ ನೌಕರರಿಗೆ ಇರುವಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ ಆ ವೇತನ ಶ್ರೇಣಿಯನ್ನು ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಸಂಬಂಧ 2019 ರಲ್ಲಿ ಸರ್ಕಾರದಿಂದ ಆದೇಶವಾದರೂ ಅದು ಜಾರಿಯಾಗಿಲ್ಲ. ಪಿಎಫ್, ಇಎಸ್‌ಐಗಳಂಥ ಸೌಲಭ್ಯವಿಲ್ಲ. ಜಿಪಂನಿAದ ಅನುಮೋದನೆಯಾಗದವರಿಗೆ ನಿವೃತ್ತಿ ಉಪಧನವೂ ಸಿಗುತ್ತಿಲ್ಲ. ಮುಂಬಡ್ತಿ ಸಿಗುತ್ತಿಲ್ಲ ಈ ಎಲ್ಲ ವಿಷಯಗಳನ್ನು ಇಟ್ಟುಕೊಂಡು, ಸ್ವಚ್ಛತೆ, ನೀರು ಪೂರೈಕೆ ಸೇರಿ ಅಗತ್ಯ ಸೇವೆಗಳನ್ನೂ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿಯಲಿದ್ದೇವೆ ಎಂದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ ನಾಯ್ಕ, ಕಾರವಾರ ತಾಲೂಕು ಅಧ್ಯಕ್ಷ ಮಂಗೇಶ ಗೋವೆಕರ್, ಭಟ್ಕಳ ತಾಲೂಕು ಉಪಾಧ್ಯಕ್ಷ ದಾಮು ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.