

ಮಂಡ್ಯ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ಜಿಲ್ಲಾಡಳಿತ ವೇಳಾಪಟ್ಟಿ ಪ್ರಕಟಿಸಿದೆ.
ಮದ್ದೂರು ತಾಲೂಕಿನ ಹೊಸಗಾವಿ ಗ್ರಾಪಂ, ಕದಲೂರು ಗ್ರಾಪಂ, ಕೆ.ಹೊನ್ನಲಗೆರೆ ಗ್ರಾಪಂ, ಕ್ಯಾತಘಟ್ಟ ಗ್ರಾಪಂ, ಮಳವಳ್ಳಿ ತಾಲೂಕಿನಲ್ಲಿ ನಾಗೇಗೌಡನದೊಡ್ಡಿ ಗ್ರಾಪಂ, ಕಗ್ಗಲೀಪುರ ಗ್ರಾಪಂ, ಬೆಳಕವಾಡಿ ಗ್ರಾಪಂ, ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಪಂ, ಕನಗನಮರಡಿ ಗ್ರಾಪಂ, ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಪಂ, ಕೆ.ಆರ್.ಪೇಟೆ ತಾಲೂಕು ಐಕನಹಳ್ಳಿ ಗ್ರಾಪಂನಲ್ಲಿ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಜು.6ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, 12ರವರೆಗೆ ಅವಕಾಶವಿರಲಿದೆ. 13ರಂದು ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು 15 ಕೊನೆಯ ದಿನವಾಗಿದೆ. ಮತದಾನವು ಜು.23ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5ರವರೆಗೆ ನಡೆಯಲಿದೆ. 26ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಇರಲಿದೆ.
ಚುನಾವಣೆ ನಡೆಸಲು 11 ಚುನಾವಣಾಧಿಕಾರಿ ಹಾಗೂ 11 ಸಹಾಯಕ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಜು.6ರಿಂದ 26ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಂತೆಯೇ ಮತದಾನವು ಮುಕ್ತಾಯಗೊಳ್ಳುವ 48 ಗಂಟೆ ಮೊದಲಿನ ಅವಧಿಯಲ್ಲಿ ಎಲ್ಲ ಮದ್ಯದಂಗಡಿ ಮತ್ತು ಮದ್ಯ ತಯಾರಿಕ ಘಟಕಗಳನ್ನು ಮುಚ್ಚಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.