ಸಾಹಿತ್ಯ ಕ್ಷೇತ್ರದ ಗೌರಿಶಂಕರ ಎಸ್.ಎಲ್.ಬಿ

18-kk2(10-25 sl byarappa nudi namana
ಕಿಕ್ಕೇರಿ ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜರುಗಿದ ಎಸ್.ಎಲ್. ಭೈರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿದರು. ಸುರೇಶ್, ನಗರ ಶ್ರೀನಿವಾಸ ಉಡುಪ, ಐಕನಹಳ್ಳಿ ಕೃಷ್ಣೇಗೌಡ, ಸಹದೇವು, ಚಲುವನಾರಾಯಣಸ್ವಾಮಿ ಮತ್ತಿತರರಿದ್ದರು.
Published on

 ಕಿಕ್ಕೇರಿ : ಕನ್ನಡ ಸಾರಸ್ವತ ಲೋಕಕ್ಕೆ ವಿಶ್ವಮಾನ್ಯತೆ ಕೀರ್ತಿ ತಂದುಕೊಟ್ಟ ಅಪರೂಪದ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಇಲ್ಲಿನ ಕೆಪಿಎಸ್ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಎಸ್.ಎಲ್. ಭೈರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಗ್ರಾಮದಲ್ಲಿ ಹುಟ್ಟಿ ವಿಶ್ವ ಸಾಹಿತ್ಯಕ್ಕೆ ಬಲುದೊಡ್ಡ ಕೊಡುಗೆಯನ್ನು ಕಾದಂಬರಿ ಮೂಲಕ ನೀಡಿದವರು ಭೈರಪ್ಪ. ಕಿಕ್ಕೇರಿಯ ಕವಿ ಕೆಎಸ್‌ನ ಒಡನಾಡಿಯ ನಂಟು ಭೈರಪ್ಪನವರಲ್ಲಿ ಇತ್ತು. ಸಾಕಷ್ಟು ಬಾರಿ ಕಿಕ್ಕೇರಿಗೆ ಬಂದಿದ್ದರು. ಸಾಹಿತ್ಯ ಉಳುಮೆಯನ್ನು ಕರಾರುವಕ್ಕಾಗಿ ಉಳುಮೆ ಮಾಡಿದ ಮಹಾನ್ ಯೋಗಿಗೆ ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಗರಿ ದೊರಕ್ಕಿದ್ದು ಕನ್ನಡ ನಾಡಿಗೆ ಸಂದ ಗೌರವ ಆಗಿದೆ ಎಂದರು.

ಸಂತಶಿವರಕ್ಕೆ ಕೆರೆ ತುಂಬಿಸಲು ಮುಂದಾದ ಹುಟ್ಟೂರಿನ ಭಗೀರಥರಾದರು. ಇವರ ದಾಟು, ಯಾನ, ಉತ್ತರಕಾಂಡ, ಧರ್ಮಶ್ರೀ ಸಾಹಿತ್ಯ ಕ್ಷೇತ್ರದ ಹೊಸ ಮೈಲಿಗಲ್ಲಾದರೆ, ದಾಟು ಜನಪ್ರಿಯ ನಾಟಕವಾಗಿದೆ. ಗೃಹಭಂಗ ಚಲನಚಿತ್ರವಾಗಿ ಜನಮನ ಗೆದ್ದಿದೆ. ನೇರನುಡಿ, ಚಿಂತಕ, ನಿರ್ಭಿತರಾಗಿ ನುಡಿಯುವ ಧೀಮಂತ ವ್ಯಕ್ತಿತ್ವ ನವ್ಯಕಾಲದ ಸಾಹಿತ್ಯ ಕ್ಷೇತ್ರಕ್ಕೆ ಪುಟವಿಟ್ಟ ಅಪರಂಜಿಯಂತಿದ್ದಾರೆ ಎಂದು ಸ್ಮರಿಸಿದರು.

ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಭೈರಪ್ಪ ಎಂದರೆ ಅಸ್ಮಿತೆ. ಇಂತಹವರ ಪರಿಚಯ ಶಾಲಾ ಕಾಲೇಜು ಮಕ್ಕಳಿಗೆ ಮೊದಲು ಆಗಬೇಕಿದೆ. ಇಲ್ಲವಾದರೆ ಮೊಬೈಲ್ ಯುಗದಲ್ಲಿ ಕನ್ನಡ, ಸಾಹಿತ್ಯ, ಸಾಹಿತಿ ಎಲ್ಲವೂ ಮರೆಯಾಗಲಿದೆ. ಕನ್ನಡ, ಕನ್ನಡ ಶಾಲೆ ಉಳಿಯಲು ಮೊದಲು ಶ್ರೇಷ್ಟ ಸಾಹಿತಿಗಳ ಪರಿಚಯ ಮಾಡಿಕೊಡಲು ಶಿಕ್ಷಕ ವೃಂದ ಮುಂದಾಗಬೇಕಿದೆ ಎಂದು ಎಚ್ಚರಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ನಗರ ಶ್ರೀನಿವಾಸ ಉಡುಪ ಕೆ.ಎಸ್.ನ ಗೀತೆ ದೇವ ನಿನ್ನ ಮಾಯಗಂಜಿ ಗೀತೆ ಹಾಡುತ್ತ ವಿಧಿ ಲೀಲೆ ಮುಂದೆ ಎಲ್ಲವೂ ನಶ್ವರವಾಗಲಿದೆ. ಭೈರಪ್ಪ ಭೌತಿಕವಾಗಿಲ್ಲವಾದರೂ ಅವರ ಸಾಹಿತ್ಯ ಸೂರ್ಯ, ಚಂದ್ರ ಇರುವವರಿಗೆ ಶಾಶ್ವತವಾಗಿ ಉಳಿಯಲಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜು ಜೀವನವನ್ನು ಉತ್ತಮ ಕಾವ್ಯ, ಸಾಹಿತ್ಯ ಓದುವ ಮೂಲಕ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಭೈರಪ್ಪನವರಂತೆ ಶ್ರದ್ಧೆ ಇದ್ದರೆ ಸರಸ್ವತಿ ಪುತ್ರರಾಗಿ ಕೀರ್ತಿಶೇಷರಾಗಲು ಸಾಧ್ಯ ಎಂದು ಹೇಳಿದರು.

ಅಗಲಿದ ಎಸ್.ಎಲ್. ಭೈರಪ್ಪ ಭಾವಚಿತ್ರಕ್ಕೆ ಪುಷ್ಪನಮನ, ಗೀತನಮನ ಸಲ್ಲಿಸಲಾಯಿತು.

ಪ್ರಾಂಶುಪಾಲ ಸಹದೇವು, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಭಾರತಿ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಕೆ.ಟಿ. ತಿಮ್ಮೇಗೌಡ, ಮಹದೇವು, ಸಣ್ಣಪ್ಪ, ದಯಾನಂದ, ಉಪನ್ಯಾಸಕ ಕುಮಾರಸ್ವಾಮಿ, ವಿನಾಯಕ, ರವೀಂದ್ರ, ವಿನಾಯಕ ಹೆಗಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net