

ಬೈಲುಕುಪ್ಪೆ: ನೂತನವಾಗಿ ಅಭಿವೃದ್ಧಿ ಪಡಿಸಲಾದ ಗ್ರಾಮದ ಕೆರೆ ಈ ಬಾರಿ ಮಳೆಯಿಂದ ಮೈತುಂಬಿದ್ದು, ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಗೌರಿಕೆರೆ ಎಂದು ನಾಮಕರಣ ಮಾಡಿ ಮಂಗಳವಾರ ಬಾಗಿನ ಅರ್ಪಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪುರ ಗ್ರಾಮಕ್ಕೆ ಸೇರಿದ ಕೆರೆ ಅಭಿವೃದ್ಧಿಗಾಗಿ ಗ್ರಾಮಸ್ಥರ ಬೇಡಿಕೆ ಮೇರೆಗೆ ಪಶು ಸಂಗೋಪನ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಕೆಲವು ತಿಂಗಳ ಹಿಂದೆ 80 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿಸಿ ಭೂಮಿಪೂಜೆ ನೆರವೇರಿಸಿ ಸುಸಜ್ಜಿತ ಕಾಮಗಾರಿಯೂ ಪೂರ್ಣಗೊಂಡಿದೆ.
ಈ ಕೆರೆಯು ಮುಂಗಾರು ಮಳೆಯಿಂದಾಗಿ ಭರ್ತಿಗೊಂಡಿದ್ದು, ಗ್ರಾಮಸ್ಥರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೈಲು ಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ತಿರುಮಲಾಪುರ ಗ್ರಾಮದ ಮುಖಂಡರಾದ ಲೋಕೇಶ್ ಮತ್ತು ಟಿ.ಸಿ. ಮಂಜೇಶ್, ಗ್ರಾಪಂ ಸದಸ್ಯ ರಾಜು ಸಮ್ಮುಖದಲ್ಲಿ ಗೌರಿಕೆರೆ ಎಂದು ನಾಮಕರಣ ಮಾಡಿ ಬಾಗಿನ ಅರ್ಪಿಸಲಾಯಿತು.
ಗ್ರಾಮದ ಮುಖಂಡ ಲೋಕೇಶ್ ಮಾತನಾಡಿ, ನಮ್ಮ ಗ್ರಾಮಕ್ಕೆ ಸೇರಿದ ಕೆರೆಗಳೇ ಇರಲಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈ ಸಂಬಂಧ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸಚಿವರು ಸ್ಪಂದಿಸಿದ್ದರಿಂದ ಕೆರೆ ನಿರ್ಮಾಣ ಸಾಕಾರಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಮದ ಸಮೀಪದಲ್ಲಿರುವ ಈ ಕೆರೆ ತಿರುಮಲಾಪುರದ ಮುಖ್ಯರಸ್ತೆ ಪಕ್ಕದಲ್ಲಿದ್ದು, ಇದಕ್ಕೆ ಕೊಲ್ಲಿಯ ನೀರು ಸೇರ್ಪಡೆಗೊಂಡಿದೆ. ಇದರಿಂದ ಯಾವಾಗಲೂ ಸದಾ ನೀರು ಇದ್ದೇ ಇರುತ್ತದೆ. ಇದರಿಂದ ನಮ್ಮ ಗ್ರಾಮದ ಸುತ್ತಮುತ್ತಲ ಜನರಿಗೆ, ಜಾನುವಾರುಗಳಿಗೆ ಹಾಗೂ ಪಕ್ಷಿಗಳಿಗೆ ಅನುಕೂಲವಾಗಿದೆ. ಅಲ್ಲದೆ ಅಂತರ್ಜಲವೂ ವೃದ್ಧಿಯಾಗಲಿದೆ ಎಂದರು.
ಪಿಡಿಒ ಬೋರೇಗೌಡ, ಗ್ರಾಪಂ ಸದಸ್ಯ ರಾಜು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಮತ್ತು ಗ್ರಾಮಸ್ಥರಿದ್ದರು.