

ಗೌರಿಬಿದನೂರು: ನಗರೋತ್ಥಾನದ ಹೆಚ್ಚಿನ ಅನುದಾನವನ್ನು ನಗರಸಭೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಬಳಸುವಂತೆ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಗರಸಭೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೂಕ್ತ ನಿರ್ವಹಣೆ ಹಾಗೂ ಸರ್ಕಾರದ ಹಣ ಸಮರ್ಪಕ ಬಳಕೆ ಹಿನ್ನಲೆಯಲ್ಲಿ ನಗರಸಭೆಗೆ 70 ಲಕ್ಷ ರೂ. ಪ್ರೋತ್ಸಾಹಧನ ಬಿಡುಗಡೆಯಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿರುವುದರಿಂದ ವಿವಿಧ ಯೋಜನೆಗಳಲ್ಲಿ ಸಾಕಷ್ಟು ಅನುದಾನ ಬರಲಿದೆ. ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ನಗರ ಯೋಜನಾಧಿಕಾರಿ ರೇಣುಕಾ ತಿಳಿಸಿದರು.
ನಗರದ ಸ್ವಚ್ಛತೆ ಕಾಪಾಡಲು ನಾಗರಿಕರು ಸಹಕರಿಸುವಂತೆ ನಗರಸಭೆ ಆಯುಕ್ತ ಚಲಪತಿ ಮನವಿ ಮಾಡಿದರು. ನಗರಸಭೆ ವ್ಯಾಪ್ತಿಯ ಆಶ್ರಯ ಯೋಜನೆಯ 214 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ನಗರಸಭೆ ಸದಸ್ಯರಾದ ಡಿ.ಎನ್.ವೆಂಕಟರೆಡ್ಡಿ, ಅಮರ್ ಶೆಟ್ಟಿ, ಸೇರಿದಂತೆ ಇತರರಿದ್ದರು.
ಕ್ರಿಯಾ ಯೋಜನೆಗಳ ಪಟ್ಟಿ: ಹಿರೇಬಿದನೂರು ಗ್ರಾಮದಲ್ಲಿ 5ಲಕ್ಷ ಲೀಟರ್ ಸಾಮರ್ಥ್ಯದ ಒವರ್‌ಹೆಡ್ ಟ್ಯಾಂಕ್ ಹಾಗೂ 1 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜನಸಂಗ್ರಹಾರ ನಿರ್ಮಿಸಿ ಕೊಳವೆ ಬಾವಿ ಕೊರೆಸಲು 1.65 ಲಕ್ಷ ರೂ., ವಾರ್ಡ್‌ನಂ.23ರಲ್ಲಿ 5ಲಕ್ಷ ಲೀಟರ್ ಸಾಮರ್ಥ್ಯದ ಒವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ 90ಲಕ್ಷ ರೂ., ಕಲ್ಲೂಡಿಯಲ್ಲಿ 5ಲಕ್ಷ ಲೀಟರ್ ಸಾಮರ್ಥ್ಯದ ಒವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ 1.03ಲಕ್ಷ ರೂ. ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ನಿವಾರಿಸಲು 1.41 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರೀಯಾ ಯೋಜನೆ ರೂಪಿಸಲಾಗಿದೆ ಎಂದು ನಗರ ಯೋಜನಾಧಿಕಾರಿ ರೇಣುಕಾ ಮಾಹಿತಿ ನೀಡಿದರು.