

ಗೌರಿಬಿದನೂರು: ನಗರಸಭೆ ಉಪ ಚುನಾವಣೆ ಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಪಕ್ಷಗಳು-ಬಣಗಳ ನಡುವೆ ಕಸರತ್ತು ಪ್ರಾರಂಭವಾಗಿದೆ. ಆದರೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಒಟ್ಟು 31 ಸದಸ್ಯರ ಪೈಕಿ 30 ಮಂದಿಗೆ ಮಾತ್ರ ನೋಟಿಸ್ ನೀಡಲಾಗಿದ್ದು ಗಾದಿ ಏರುವವರ ಕನಸಿಗೆ ಕಾನೂನು ಸಮರ ಜಯಿಸುವ ಸವಾಲು ಎದುರಾಗಿದೆ.
ಈ ಹಿಂದಿನ ಅಧ್ಯಕ್ಷೆ ಗಾಯತ್ರಿ ಬಸವರಾಜ್ ಕಾಂಗ್ರೆಸ್‌ನ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲೇ ಅಧ್ಯಕ್ಷ ಸ್ಥಾನಕ್ಕೆ ಜ.3 ಚುನಾವಣೆ ನಿಗದಿಯಾಗಿದೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ 10ನೇ ವಾರ್ಡ್‌ನ ಸದಸ್ಯೆ ಇತ್ತೀಚೆಗೆ ನಿಧನರಾಗಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ಪೂರ್ಣಗೊಂಡು, ಕೆ.ಎಚ್.ಪುಟ್ಟಸ್ವಾಮಿ ಗೌಡ ಬಣದ ಅಭ್ಯರ್ಥಿ ಸರ್ದಾರ್ ಅಖ್ತರ್ ಗೆಲುವು ಸಾಧಿಸಿದ್ದಾರೆ.
ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದಾರೆ. ಆದರೆ ಅಧ್ಯಕ್ಷ ಸ್ಥಾನದ ಚುನಾವಣೆಗೆ 30 ಸದಸ್ಯರಿಗೆ ಮಾತ್ರ ಮತದಾನದ ಕುರಿತು ನೋಟಿಸ್ ನೀಡಲಾಗಿದೆ, 10ನೇ ವಾರ್ಡ್‌ಗೆ ಇನ್ನೂ ಚುನಾವಣೆ ನಡೆಯದ ಕಾರಣ ನೋಟಿಸ್ ಜಾರಿಯಾಗಿಲ್ಲ, ಇದೇ ಕಾರಣಕ್ಕೆ ಆದರೆ ಅಧ್ಯಕ್ಷರ
ಕಾಂಗ್ರೆಸ್ ಹಾಗೂ ಪ್ರತಿಸ್ಪರ್ಧಿ ಬಣ ತಲಾ 16 ಮತಗಳನ್ನು ಹೊಂದುವ ಮೂಲಕ ಸಮಬಲ ಸಾಧಿಸಿವೆ. 10ನೇ ವಾರ್ಡ್ ಸದಸ್ಯೆಗೆ ಹಾಗೂ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಕಾಂಗ್ರೆಸ್ ವಿರೋಧಿ ಬಣ ನಗರಸಭೆಯಲ್ಲಿ ಸುಲಭವಾಗಿ ಚುಕ್ಕಾಣಿ ಹಿಡಿಯಲಿದೆ. ಆದರೆ ಮತದಾನಕ್ಕೆ ಅವಕಾಶ ನೀಡದಿರುವುದು ಕಾನೂನು ಸಮರಕ್ಕೆ ನಾಂದಿ ಹಾಡಿದೆ.
ಸಮಬಲ: ಪಕ್ಷೇತರನ ಬೆಂಬಲ ಸೇರಿ ಕಾಂಗ್ರೆಸ್ 15 ಸದಸ್ಯರ ಜತೆಗೆ ಶಾಸಕರ ಮತವೂ ಸೇರಿ 16 ಮತಗಳನ್ನು ಹೊಂದಿದೆ. ಪ್ರತಿಸ್ಪರ್ಧಿ ಬಣಗಳಾದ ಕೆಎಚ್‌ಪಿ, ಜೆಡಿಎಸ್, ಬಿಜೆಪಿ, ಪಕ್ಷೇತರ ಸೇರಿ 15 ಸದಸ್ಯರು ಹಾಗೂ ಸಂಸದರ ಮತ ಸೇರಿ ಒಟ್ಟು 16 ಮತಗಳನ್ನು ಹೊಂದಿದ್ದಾರೆ. ಎರಡೂ ಕಡೆ ಸಮಬಲ ಏರ್ಪಟ್ಟಿದೆ. ಕಾಂಗ್ರೆಸ್ ಸದಸ್ಯರು ಈಗಾಗಲೇ ಪ್ರವಾಸಕ್ಕೆ ತೆರಳಿದ್ದಾರೆ.
ಜಿಲ್ಲಾಧಿಕಾರಿಗೆ ಮೊರೆ: ಅಧ್ಯಕ್ಷ ಸ್ಥಾನಕ್ಕೆ 7 ದಿನಗಳ ಮುಂಚೆಯೇ ಅಧಿಸೂಚನೆ ಹೊರಡಿಸಲಾಗಿದೆ. ಅದಾದ ಬಳಿಕ ಉಪ ಚುನಾವಣೆ ನಡೆದಿದೆ, ಇದೇ ಕಾರಣಕ್ಕೆ ನೂತನ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ. ಆದರೆ ಉಪಚುನಾವಣೆಯಲ್ಲಿ ಆಯ್ಕೆಯಾಗಿರುವ ತಮಗೆ ಮತದಾನಕ್ಕೆ ಅವಕಾಶ ನೀಡಬೇಕು, ಇಲ್ಲವೇ ಅಧ್ಯಕ್ಷ ಆಯ್ಕೆ ಚುನಾವಣೆ ಮುಂದೂಡುವಂತೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಗೆ ನೂತನ ಸದಸ್ಯೆ ಸರ್ದಾರ್ ಅಕ್ತರ್ ಮನವಿ ಸಲ್ಲಿಸಿದ್ದಾರೆ.
ಕೈಜಾರಲಿದೆ ಅಧಿಕಾರ?: ನಗರಸಭೆ ಅಧಿಕಾರದಿಂದ ಕಾಂಗ್ರೆಸ್ ದೂರವಿಡಲು ಪುಟ್ಟಸ್ವಾಮಿಗೌಡ ಹಾಗೂ ಇತರರ ಗುಂಪು ಪ್ರಯತ್ನಿಸುತ್ತಿದೆ. ಮಾಲೂರು ಪುರಸಭೆಗೆ ನಡೆದ ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದ್ದರಿಂದ ಇಲ್ಲಿಯೂ ನಾಮ ನಿರ್ದೇಶಿತರಿಗೆ ಹಾಗೂ ಉಪ ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಮತದಾನಕ್ಕೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ಪ್ರತಿಸ್ಪರ್ಧಿ ಬಣ ತಯಾರಿ ನಡೆಸಿದೆ.