ಗಣೇಶೋತ್ಸವಕ್ಕೆ ಖರೀದಿ ಭರಾಟೆ, ಮಾರುಕಟ್ಟೆಗಳಲ್ಲಿ ಜನದಟ್ಟಣೆ

KR_Market (1)
Published on

ಬೆಂಗಳೂರು: ಗೌರಿ- ಗಣೇಶ ಹಬ್ಬದ ಹಬ್ಬಕ್ಕೂ ಮುನ್ನಾದಿನ ಸೋಮವಾರ ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ಕಳೆಗಟ್ಟಿತ್ತು. ವರಮಹಾಲಕ್ಷ್ಮೀ ಹಬ್ಬದಲ್ಲಿ ಇದ್ದಷ್ಟು ದುಬಾರಿ ಅಲ್ಲದಿದ್ದರೂ, ಮಳೆಯಿಂದಾಗಿ ಹೂ- ಹಣ್ಣುಗಳ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ.

ಹಬ್ಬಕ್ಕೆ ಬೆಲೆ ಮತ್ತಷ್ಟೂ ಹೆಚ್ಚಲಿದೆ ಎಂಬ ಕಾರಣಕ್ಕೆ ಭಾನುವಾರದಂದೇ ಬಹುತೇಕರು ಹೂಹಣ್ಣಗಳ ಖರೀದಿ ಮಾಡಿದ್ದು, ಸೋಮವಾರವೂ ನಗರದ ಕೆ.ಆರ್. ಮಾರುಕಟ್ಟೆ, ಯಶವಂತಪುರ, ದಾಸರಹಳ್ಳಿ, ಮಲ್ಲೇಶ್ವರ, ಮಡಿವಾಳ, ಜಯನಗರ, ಬನಶಂಕರಿ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಜನರು ಜಮಾಯಿಸಿ ವ್ಯಾಪಾರದಲ್ಲಿ ನಿರತರಾಗಿದ್ದರು. ಪರಿಣಾಮ, ಮಾರುಕಟ್ಟೆಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ಸಿಕ್ಕು ಉಂಟಾಗಿ ವಾಹನಸವಾರರು ಪರದಾಟಬೇಕಾಯಿತು.

ಶ್ರಾವಣ ಮಾಸ ಹಬ್ಬದ ಸೀಸನ್ ಎಂಬ ಕಾರಣಕ್ಕೆ ಬೆಂಗಳೂರು ಸುತ್ತಮುತ್ತ ಹಾಗೂ ಕೋಲಾರ, ತುಮಕೂರು ಮತ್ತಿತರ ಭಾಗಗಳಲ್ಲಿ ರೈತರು ಸೇವಂತಿಗೆ ಹೂವನ್ನು ಹೆಚ್ಚಾಗಿ ಬೆಳೆದಿದ್ದಾರೆ. ಆದರೆ, ಮಳೆಯಿಂದಾಗಿ ಬೆಳೆ ಹಾಳಾಗಿದ್ದು, ಬೇಡಿಕೆಯ ಜತೆಗೆ ದರ ಹೆಚ್ಚಿದೆ. ವರಮಹಾಲಕ್ಷ್ಮೀ ಹಬ್ಬದಲ್ಲಿ ನಡೆದಷ್ಟು ವ್ಯಾಪಾರ ಗೌರಿ- ಗಣೇಶ ಹಬ್ಬದಲ್ಲಿ ಇಲ್ಲ. ಹೀಗಾಗಿ ದರ ಕೊಂಚ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಗರಿಕೆ, ಎಕ್ಕದ ಹೂವಿಗೆ ಬೇಡಿಕೆ:

ಕೆ.ಆರ್. ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಸೇವಂತಿಗೆ 300-400 ರೂ. ಹಾಗೂ ಗುಣಮಟ್ಟದ ಹೂವು ಕೆ.ಜಿ.ಗೆ 400 -500 ರೂ. ಇದೆ. ಚಿಲ್ಲರೆ ಮಾರಾಟಗಾರರು ಬಿಡಿ ಹೂವನ್ನು ಕೆ.ಜಿ.ಗೆ 500- 600 ರೂ. ಮೇಲ್ಪಟ್ಟ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಗರಿಕೆ, ಬೇಲದ ಹಣ್ಣು, ಎಕ್ಕದ ಹೂಹಾರಕ್ಕೆ ಬೇಡಿಕೆ ಹೆಚ್ಚಿದೆ. ಇದರೊಂದಿಗೆ ಬಾಳೆಕಂಬ, ಹೂವಿನ ಹಾರ ಮತ್ತಿತರ ಪೂಜಾ ಸಾಮಗ್ರಿಗಳು ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಬಾಗಿನ ಸಾಮಗ್ರಿಗಳು ಹಾಗೂ ಮೊರ ಮತ್ತು ಪೂಜಾ ಸಾಮಗ್ರಿಗಳ ಖರೀದಿ ಸಾಮಾನ್ಯವಾಗಿತ್ತು.

ಬಗೆಬಗೆಯ ಮೂರ್ತಿಗಳು

ಮಾರುಕಟ್ಟೆಗೆ ಬಗೆ ಬಗೆಯ ಗೌರಿ-ಗಣೇಶ ಮೂರ್ತಿಗಳು ಆಗಮಿಸಿವೆ. 100 ರೂ.ನಿಂದ ಆರಂಭವಾಗಿ, 2 ಲಕ್ಷ ರೂ.ವರೆಗೆ ಮೂರ್ತಿಗಳು ಮಾರಾಟವಾಗುತ್ತಿವೆ. ಉದ್ದನಾಮ, ಅಡ್ಡನಾಮವುಳ್ಳ, ಎಡಮುರಿ- ಬಲಬುರಿ ಹೀಗೆ ಅವರವರ ಸಂಪ್ರದಾಯಕ್ಕೆ ತಕ್ಕಂತೆ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ಗಜಗೌರಿ, ಮಡಿಗೌರಿ ಮತ್ತಿತರ ಬಗೆಯ ಗೌರಿಯರನ್ನು ಖರೀದಿಸುತ್ತಿದ್ದರು.

ತೆಂಗಿನ ಕಾಯಿಗಳ ಅಬ್ಬರ

ಗಣೇಶ ಹಬ್ಬದಲ್ಲಿ ಪೂಜೆಗೆ ತೆಂಗಿನಕಾಯಿಗಳ ಬಳಕೆ ಹೆಚ್ಚು. ಆದರೆ, ಈ ಬಾರಿ ತೆಂಗಿನಕಾಯಿಗಳ ದರ ಗಗನಕ್ಕೇರಿದೆ. ಒಂದು ಸಣ್ಣ ಗಾತ್ರದ ಕಾಯಿಗೂ 50 ರೂ. ದರವಿದ್ದು, ಮಧ್ಯಮ ಗಾತ್ರದ ಕಾಯಿಗೆ 60 ರೂ. ಹಾಗೂ ದಪ್ಪ ಕಾಯಿಗೆ 70 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ.

ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ದರ (ಬಿಡಿ ಹೂವು ಕೆ.ಜಿ.ಗಳಲ್ಲಿ)

ಕನಕಾಂಬರ 2,500 3000 ರೂ.

ಮಲ್ಲಿಗೆ ಮೊಗ್ಗು 1000 1.200ರೂ.

ಕಾಕಡ 600 ರೂ.

ಕಣಗೆಲೆ ಹೂ 400 ರೂ.

ಸೇವಂತಿಗೆ 300- 500 ರೂ.

ಸುಗಂಧ ರಾಜ 300 ರೂ.

ಗುಲಾಬಿ 250-300 ರೂ.

ತುಳಸಿ ಮಾರಿಗೆ 100- 150 ರೂ.

ಎಕ್ಕದ ಹಾರ 100 ರೂ.

ಚೆಂಡುಹೂ 40- 50 ರೂ.

ತಾವರೆ ಜೋಡಿ 50 ರೂ.

ಗರಿಕೆ (ಕಟ್ಟು) 20- 50 ರೂ.

ಹಣ್ಣುಗಳ ದರ (ಕೆ.ಜಿ.ಗೆ)

ಸೇಬು 120- 150 ರೂ.

ದಾಳಿಂಬೆ 150 ರೂ.

ಮೋಸಂಬಿ 50 ರೂ

ಕಿತ್ತಳೆ 100 ರೂ.

ಸಪೋಟಾ 120 ರೂ.

ದ್ರಾಕ್ಷಿ 100 ರೂ.

ಏಲಕ್ಕಿ ಬಾಳೆ 120

ಪೈನಾಪಲ್- ಜೋಡಿ 80- 100 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net