

ಬೆಂಗಳೂರು: ನಗರದೆಲ್ಲೆಡೆ ಮಂಗಳವಾರ ಸಡಗರ, ಸಂಭ್ರಮದಿಂದ ಗೌರಿ ಹಬ್ಬ ಆಚರಿಸಲಾಯಿತು.
ಬಡಾವಣೆಗಳು ಸೇರಿ ಎಲ್ಲೆಡೆ ಮನೆ ಅಂಗಳ ಬಣ್ಣ ಬಣ್ಣದ ರಂಗೋಲಿಯಿಂದ ಹಾಗೂ ಬಾಗಿಲುಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು. ಸಂಪ್ರದಾಯದಂತೆ ಹಲವರು ಮನೆಯಲ್ಲಿ ಅಂದದ ಮಂಟಪದಲ್ಲಿ ಗೌರಿಯನ್ನು ಕೂರಿಸಿ ಹೂಗಳಿಂದ ಅಲಂಕರಿಸಿ ಬಾಗಿನ ಹಾಗೂ ಹಣ್ಣುಗಳನ್ನಿಟ್ಟು ಪೂಜೆ ನೆರವೇರಿಸಿದರು. ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ದೇವಿಗೆ ನೈವೇದ್ಯ ಅರ್ಪಿಸಿದರು.
ಹೆಣ್ಣು ಮಕ್ಕಳು ತವರಿನಿಂದ ಬಂದ ಬಾಗಿನವನ್ನು ದೇವರ ಮುಂದಿಟ್ಟು ಪೂಜಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಆರ್ಶೀವಾದ ಪಡೆದರು. ಹೋಳಿಗೆ ಸೇರಿ ಬಗೆ ಬಗೆಯ ಅಡುಗೆ ಸಿದ್ದಪಡಿಸಿ ಮನೆಯವರೊಟ್ಟಿಗೆ ಊಟ ಮಾಡಿ ಸಂಭ್ರಮಿಸಿದರು.
ಬಗೆಬಗೆಯ ಭಕ್ಷ್ಯಗಳು
ಮಂಗಳವಾರ ಗೌರಿಯನ್ನು ಬರಮಾಡಿಕೊಂಡು ಬಾಗಿನ ಅರ್ಪಿಸಿ ಹೋಳಿಗೆ ಸವಿದ ಜನರು, ಬುಧವಾರ ಗಣಪನ ಸ್ವಾಗತಕ್ಕಾಗಿ ಭರದ ಸಿದ್ಧತೆ ನಡೆಸಿದ್ದಾರೆ. ಗಣಪನಿಗೆ ಪ್ರಿಯವಾದ ಕಡುಬು, ಖರ್ಜಿಕಾಯಿ, ಮೋದಕ, ಲಾಡು, ರವೆ ಉಂಡೆ, ಚಕ್ಕುಲಿ, ಕೋಡುಬಳೆ ಮೊದಲಾದ ಖಾದ್ಯಗಳ ಸಿದ್ಧತೆಯಲ್ಲಿ ತೊಡಗಿದ್ದರು. ಮತ್ತೊಂದೆಡೆ ಪೂಜಾ ಸಾಮಗ್ರಿಗಳು, ಹೂ ಹಣ್ಣುಗಳ ಖರೀದಿ ಮಂಗಳವಾರವೂ ಭಿರುಸಾಗಿತ್ತು.
ಗಣಪತಿ ಮೂರ್ತಿ ವಿತರಣೆ
ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ಹಲವೆಡೆ ಮಣ್ಣಿನ ಗಣಪನ ಮೂರ್ತಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆನ್‌ಲೈನ್ ಸೇರಿ ವಿವಿಧ ಸಂಘ ಸಂಸ್ಥೆಗಳಿಂದ ಪರಿಸರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಬಹುತೇಕ ಭಕ್ತರು ಮನೆಯಲ್ಲಿ ಅರಿಶಿನದಿಂದ ತಯಾರಿಸಿದ ವಿಗ್ರಹಗಳನ್ನಿಟ್ಟು ಪೂಜಿಸಲು ಸಿದ್ಧತೆ ನಡೆಸಿದರೆ, ಹಲವರು ಮಣ್ಣಿನ ಗಣಪ ಶ್ರೇಷ್ಠ ಎಂಬ ಕಾರಣಕ್ಕೆ ಮಾರುಕಟ್ಟೆಗಳಲ್ಲಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಕೊಳ್ಳುವಲ್ಲಿ ನಿರತರಾಗಿದ್ದರು.