ಗೌರಿ, ಗಣೇಶ ಉತ್ಸವ ಯಶಸ್ಸಿಗೆ ಸಹಕಾರ ನೀಡಿ

26 vpt 2.1
Published on

ವಿರಾಜಪೇಟೆ : ವಿರಾಜಪೇಟೆ ಐತಿಹಾಸಿಕ ಗೌರಿ-ಗಣೇಶ ಉತ್ಸವವನ್ನು ಕಳೆದ ಹಲವು ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯು ಯಾವುದೇ ತೊಂದರೆ ಇಲ್ಲದೆ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಕೋರಿದರು.


ವಿರಾಜಪೇಟೆ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿರಾಜಪೇಟೆ ಗೌರಿ-ಗಣೇಶ ಜನೋತ್ಸವ ಸಮಿತಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಉತ್ಸವ ಆಚರಣಾ ವೇಳೆ ಪ್ರತಿಯೊಬ್ಬರು ಕಾನೂನು ಪಾಲಿಸಬೇಕು. ಸಾಮರಸ್ಯಕ್ಕೆ ಬೆಲೆ ನೀಡಬೇಕು. ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆಚರಣಾ ಸಮಿತಿಗಳಿಗೆ ಯಾವುದೇ ರೀತಿಯಲ್ಲಿ ಅಡೆತಡೆಗಳು ಬಾರದ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಕೋರಿದರು.


ಬಸವೇಶ್ವರ ಗೌರಿ ದೇಗುಲ ಸಮಿತಿ ಸದಸ್ಯರಾದ ನರೇಂದ್ರ ಕಾಮತ್ ಮಾತನಾಡಿ, ನಗರದಲ್ಲಿ ರಾತ್ರಿ 8 ಗಂಟೆಗೆ ಮಾಹಾಪೂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಅದರೆ ಕಾರ್ಯಕ್ರಮ ನಡುವೆಯೇ ಕೆಲ ಆಧಿಕಾರಿಗಳು ಕಾರ್ಯಕ್ರಮ ಸ್ಥಗಿತಗೋಳಿಸುವಂತೆ ತಾಕಿತ್ತು ಮಾಡುತ್ತಾರೆ. ಸಮಯ ಅವಕಾಶ ನೀಡಬೇಕು ಎಂದು ಕೋರಿದರು.


ಕಾವೇರಿ ಗಣೇಶೋತ್ಸವ ಸಮಿತಿಯ ನಂಬುಡುಮಾಡ ರಾಜಪ್ಪ ಮಾತನಾಡಿ, ಸರ್ಕಾರಿ ಅದೇಶದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಅಯೋಜನೆ ಮಾಡುವುದು ಕಷ್ಟ ಸಾಧ್ಯವಾಗಿದ್ದು, ಶಾಸಕರು ಕಲಾವಿದರ ಮತ್ತು ಶಾಲಾ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಅನುವುಮಾಡಿಕೊಡುವಂತೆ ಮನವಿ ಮಾಡಿದರು.


ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ, ಪಿಒಪಿ ಮೂರ್ತಿಗಳನ್ನು ನಿಷೇಧ ಮಾಡಲಾಗಿದ್ದು, ನೈಜ ಮಣ್ಣಿನಿಂದ ನಿರ್ಮಿಸಲಾದ ಮೂರ್ತಿಗಳನ್ನು ಸಮಿತಿ ಬಳಸಬೇಕು. ವಿಸರ್ಜನೆ ವೇಳೆಯಲ್ಲಿ ಮೂರ್ತಿಯನ್ನು ಬಿಟ್ಟು ಹೂವು ಹಾಗೂ ಇತರ ವಸ್ತುಗಳನ್ನು ಹಾಕುವಂತಿಲ್ಲ ಎಂದು ತಿಳಿಸಿದರು.


ಪೊಲೀಸ್ ಉಪ ವಿಭಾಗದ ಅಧೀಕ್ಷಕ ಮೋಹನ್ ಕುಮಾರ್ ಮಾತನಾಡಿ, ಉತ್ಸವಕ್ಕೆ ಧ್ವನಿವರ್ಧಕ ಅಳವಡಿಕೆಯ ಕುರಿತು ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು. ಬೆಳಗ್ಗಿನ ಜಾವ 6 ರಿಂದ ರಾತ್ರಿ 10 ರ ವರೆಗೆ ಧ್ವನಿವರ್ಧಕ ಅಳವಡಿಸಬಹುದು. ಅದರೇ ರಾತ್ರಿ 10 ರಿಂದ ಮುಂಜಾನೆಯ 6 ವರೆಗೆ ಯಾವುದೇ ಧ್ವನಿವರ್ಧಕ ಅಳವಡಿಸಲು ಅನುಮತಿ ಇಲ್ಲ. ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರು ಅನುಮತಿ ಪಡೆಯುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಕಡ್ಡಾಯ ಎಂದರು.


ಗೌರಿ- ಗಣೇಶೋತ್ಸವ ಜನೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶಬರೀಶ್ ಶೆಟ್ಟಿ, ತಹಸೀಲ್ದಾರ್ ರಾಮಚಂದ್ರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜೇಶ್ ಸಲಹೆ ನೀಡಿದರು.


ಸಭೆಯಲ್ಲಿ ಸೆಸ್ಕ್ ಇಂಜಿನಿಯರ್ ಸುರೇಶ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಲಿಂಗರಾಜ್, ಆಗ್ನಿ ಶಾಮಕ ಇಲಾಖೆಯ ಅಧಿಕಾರಿಗಳಾದ ಮಂಜೇಗೌಡ, ವಿರಾಜಪೇಟೆ ವೃತ್ತ ನೀರಿಕ್ಷಕರಾದ ಶಿವರುದ್ರ, ಕುಟ್ಟ ವೃತ್ತ ನೀರಿಕ್ಷಕ ಮಂಜಪ್ಪ, ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ಗಾಮಾಂತರ ಠಾಣೆಯ ಪಿಎಸ್‌ಐ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net